ಕಾರ್ಲ್‌ಸನ್‌ಗೆ ಹ್ಯಾಟ್ರಿಕ್ ಪ್ರಶಸ್ತಿ
ವಿಶ್ವ ಚೆಸ್ ಚಾಂಪಿಯನ್‌ಶಿಪ್

ನ್ಯೂಯಾರ್ಕ್, ಡಿ.1: ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರನೆ ಬಾರಿ ಪ್ರಶಸ್ತಿ ಜಯಿಸಿದ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿಶ್ವ ಚದುರಂಗದಾಟದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದಾರೆ.
ಟೈ-ಬ್ರೇಕ್‌ನಲ್ಲಿ ಎದುರಾಳಿ ರಶ್ಯದ ಸೆರ್ಜಿ ಕಾರ್ಯಕಿನ್‌ರನ್ನು ಮಣಿಸಿದ ಕಾರ್ಲ್‌ಸನ್ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದಾರೆ. ಈ ಗೆಲುವಿನ ಮೂಲಕ ಕಾರ್ಲ್‌ಸನ್ ಚೆಸ್ ದಂತಕತೆ ಗ್ಯಾರಿ ಕಾಸ್ಪರೊವ್ ಸಾಧನೆ ಸರಿಗಟ್ಟುವತ್ತ ಹೆಜ್ಜೆ ಇಟ್ಟಿದ್ದಾರೆ. ಕಾಸ್ಪರೊವ್ 15 ವರ್ಷಗಳ ಕಾಲ ಚೆಸ್‌ನಲ್ಲಿ ಪಾರಮ್ಯ ಸಾಧಿಸಿದ್ದರು.
ಬುಧವಾರ ಇಲ್ಲಿ ವಿಶ್ವ ಚೆಸ್ ಕಿರೀಟಕ್ಕಾಗಿ ನಡೆದ ಹಣಾಹಣಿ ನಾಟಕೀಯ ಟೈ-ಬ್ರೇಕ್‌ನಲ್ಲಿ ಕೊನೆಗೊಂಡಿತು. 26ರ ಪ್ರಾಯದ ಇಬ್ಬರು ಚೆಸ್‌ಪಟುಗಳು ಹೆಚ್ಚುವರಿ ಸಮಯದಲ್ಲಿ ಸಮಬಲ ಹೋರಾಟ ನೀಡಿದರು.
ಬ್ಲಿಝ್ ಮಾದರಿಯ ಚೆಸ್‌ನಲ್ಲಿ 2010ರಿಂದ ನಂ.1 ಸ್ಥಾನದಲ್ಲಿರುವ ಕಾರ್ಲ್‌ಸನ್ ಪ್ರಶಸ್ತಿ ಫೇವರಿಟ್ ಆಗಿ ಗುರುತಿಸಿಕೊಂಡಿದ್ದರು. ನಾರ್ವೆಯ ಕಾರ್ಲ್‌ಸನ್ ಈ ವರ್ಷ ಹಲವು ಬ್ಲಿಝ್ ಟೂರ್ನಿಯನ್ನು ಆಡಿದ್ದು, ಅಕ್ಟೋಬರ್‌ನಲ್ಲಿ ಅಮೆರಿಕದ ಗ್ರಾಂಡ್ ಮಾಸ್ಟರ್ ಹಿಕರು ನಕಮುರಾರನ್ನು ಮಣಿಸಿದ್ದರು.
ಕಾರ್ಲ್‌ಸನ್ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್(ಫಿಡೆ) 2013 ಹಾಗೂ 2014ರಲ್ಲಿ ಆಯೋಜಿಸಿದ್ದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವಿಶ್ವನಾಥನ್ ಆನಂದ್‌ರನ್ನು ಸೋಲಿಸಿ ಚಾಂಪಿಯನ್‌ಶಿಪ್ ಕಿರೀಟ ಧರಿಸಿದ್ದರು.
12ರ ಹರೆಯದಲ್ಲಿ ಚೆಸ್ ಗ್ರಾಂಡ್‌ಮಾಸ್ಟರ್ ಆಗಿರುವ ರಶ್ಯದ ಸೆರ್ಜಿ ಕಾರ್ಯಕನ್ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ್ದರು.
ಚೆಸ್ ಸ್ಪರ್ಧೆಯಲ್ಲಿ ಆರಂಭದಲ್ಲಿ ವಿನ್ನರ್ ಹಾಗೂ ರನ್ನ್ರರ್ ಅಪ್‌ಗೆ ಬಹುಮಾನ ಮೊತ್ತ ಕ್ರಮವಾಗಿ 600,000 ಯುರೋ ಹಾಗೂ 400,000 ಯುರೋ ಎಂದು ನಿಗದಿಯಾಗಿತ್ತು. ಆದರೆ, ಫೈನಲ್ ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾದ ಕಾರಣ ವಿಜೇತರಿಗೆ 550,000 ಹಾಗೂ ರನ್ನರ್ ಅಪ್‌ಗೆ 450,000 ಯುರೋ ನೀಡಲು ನಿರ್ಧರಿಸಲಾಗಿದೆ.







