ಏಷ್ಯಾ ಕಪ್: ಭಾರತ ಫೈನಲ್‌ಗೆ
ಮಿಥಾಲಿ ರಾಜ್, ಏಕ್ತಾ ಬಿಷ್ಟ್ ಸಾಹಸ

ಬ್ಯಾಂಕಾಕ್, ಡಿ.1: ಮಿಥಾಲಿ ರಾಜ್ ಅರ್ಧಶತಕ ಹಾಗೂ ಏಕ್ತಾ ಬಿಷ್ಟ್ 3 ವಿಕೆಟ್ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ 52 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಎಸಿಸಿ ಮಹಿಳೆಯರ ಏಷ್ಯಾ ಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದೆ.
ಇಲ್ಲಿನ ಎಐಟಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತು. ಶ್ರೇಷ್ಠ ಫಾರ್ಮ್ ಮುಂದುವರಿಸಿದ ಮಿಥಾಲಿ ರಾಜ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 9ನೆ ಅರ್ಧಶತಕ (62)ಬಾರಿಸಿ ತಂಡಕ್ಕೆ ಆಸರೆಯಾದರು.
ವೇದಾ ಕೃಷ್ಣಮೂರ್ತಿ(21) ಹಾಗೂ ಸ್ಮತಿ ಮಂಧಾನಾ(21) ರಾಜ್‌ಗೆ ಸಾಥ್ ನೀಡಿದರು. ಗೆಲ್ಲಲು 122 ರನ್ ಗುರಿ ಪಡೆದ ಶ್ರೀಲಂಕಾ ತಂಡವನ್ನು ಭಾರತದ ಸ್ಪಿನ್ನರ್‌ಗಳಾದ ಬಿಷ್ಟ್ (3-8) ಹಾಗೂ ಪ್ರೀತಿ ಬೋಸ್(3-14)9 ವಿಕೆಟ್ ನಷ್ಟಕ್ಕೆ 69 ರನ್‌ಗೆ ನಿಯಂತ್ರಿಸಿದರು.
ಶ್ರೀಲಂಕಾದ ಪರ ದಿಲಾನಿ ಮನೊದರ ಸುರಂಗಿಕಾ(20) ಗರಿಷ್ಠ ಸ್ಕೋರ್ ಬಾರಿಸಿದರು. ಭಾರತದ ಬ್ಯಾಟಿಂಗ್‌ನಲ್ಲಿ 33ರ ಪ್ರಾಯದ ಮಿಥಾಲಿ ರಾಜ್ ದ್ವಿತೀಯ ಶ್ರೇಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿ ಮಿಂಚಿದರು. ಮಂಧಾನಾ(21) ಅವರೊಂದಿಗೆ ಮೊದಲ ವಿಕೆಟ್‌ಗೆ 46 ರನ್ ಸೇರಿಸಿದ ಮಿಥಾಲಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಕೊನೆಯ ಓವರ್‌ನ 5ನೆ ಎಸೆತದಲ್ಲಿ ರನೌಟಾದ ಮಿಥಾಲಿ 59 ಎಸೆತಗಳಲ್ಲಿ 6 ಬೌಂಡರಿ ಸಹಿತ 62 ರನ್ ಗಳಿಸಿದರು. ಶ್ರೀಲಂಕಾ ಅಂತಿಮ 3 ಓವರ್‌ಗಳಲ್ಲಿ 24 ರನ್ ಗಳಿಸಿ ಶ್ರೀಲಂಕಾದ ಗೆಲುವಿಗೆ ಸವಾಲಿನ ಮೊತ್ತ ನೀಡಿತು.
ಸಂಕ್ಷಿಪ್ತ ಸ್ಕೋರ್
ಭಾರತ 20 ಓವರ್‌ಗಳಲ್ಲಿ 121/4
(ಮಿಥಾಲಿ ರಾಜ್ 62, ವೇದಾ ಕೃಷ್ಣಮೂರ್ತಿ 21, ಸ್ಮತಿ ಮಂಧಾನ 21, ಶ್ರೀಪಾಲಿ ವೀರಕೋಡಿ 1-18)
ಶ್ರೀಲಂಕಾ 20 ಓವರ್‌ಗಳಲ್ಲಿ 69/9
(ದಿಲಾನಿ ಮನೊದರ 20, ಏಕ್ತಾ ಬಿಷ್ಟ್ 3-8, ಪ್ರೀತಿ ಬೋಸ್ 3-14)







