ಯೋಜಿಸಿದ್ದಕ್ಕಿಂತ ಮೊದಲೇ ಪ್ರಧಾನಿ ನೋಟು ರದ್ದತಿ ಘೋಷಿಸಿರುವ ಸಾಧ್ಯತೆಯಿದೆ ಎಂದ ನೀತಿ ಆಯೋಗದ ಉಪಾಧ್ಯಕ್ಷ
ಮಾಹಿತಿ ಸೋರಿಕೆ ಭೀತಿ ಕಾರಣ

ಹೊಸದಿಲ್ಲಿ,ಡಿ.1: ನೋಟು ರದ್ದತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳು ಏನೇ ಆಗಿರಲಿ, ಅವರ ನಿರ್ಧಾರದ ಅನುಷ್ಠಾನವು ನಂಬಲಾಗದಷ್ಟು ಪ್ರತಿಕ್ರಿಯಾಶೀಲವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಹೆಚ್ಚುಕಡಿಮೆ ಪ್ರತಿದಿನವೂ ವಿತ್ತ ಸಚಿವಾಲಯ ಮತ್ತು ಆರ್‌ಬಿಐ ಹೊಸ ಅಧಿಸೂಚನೆಗಳನ್ನು ಹೊರಡಿಸುತ್ತಲೇ ಇವೆ ಮತ್ತು ಆರ್ಥಿಕತೆಯು ನಗದು ಕೊರತೆಯ ಕಪಿಮುಷ್ಠಿಯಲ್ಲಿ ತೊಳಲಾಡುತ್ತಲೇ ಇದೆ. ವ್ಯವಸ್ಥೆಯು ಹದಗೆಟ್ಟಿರುವುದು ಸರಕಾರವು ನೋಟು ರದ್ದತಿ ಕ್ರಮಕ್ಕೆ ಎಷ್ಟರ ಮಟ್ಟಿಗೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿತ್ತು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈಗ ನೀತಿ ಆಯೋಗದ ಉಪಾಧ್ಯಕ್ಷ,ಖ್ಯಾತ ಆರ್ಥಿಕ ತಜ್ಞ ಅರವಿಂದ ಪನಗಾರಿಯಾ ಅವರು ಇದಕ್ಕೊಂದು ಅಧಿಕೃತ ವ್ಯಾಖ್ಯಾನವನ್ನು ನೀಡಿದ್ದಾರೆ.
ನೋಟು ರದ್ದತಿಯ ಸುದ್ದಿ ಸೋರಿಕೆಯಾಗ ತೊಡಗಿತ್ತು ಎನ್ನುವುದು ತನಗೆ ತಿಳಿದಿತ್ತು ಎಂದು ಆಂಗ್ಲ ನಿಯತಕಾಲಿಕವೊಂದಕ್ಕೆ ಗುರುವಾರ ನೀಡಿರುವ ಸಂದರ್ಶನದಲ್ಲಿ ಹೇಳಿರುವ ಪನಗಾರಿಯಾ, ದೈನಿಕ್ ಜಾಗರಣ್‌ನ ನ.6ರ ಸಂಚಿಕೆಯಲ್ಲಿ ಹೊಸ 2,000 ರೂ.ನೋಟುಗಳ ಕುರಿತು ವರದಿಯೊಂದು ರಿಜರ್ವ್ ಬ್ಯಾಂಕಿನಿಂದ ವಿವಿಧೆಡೆಗೆ ನೋಟುಗಳ ಸಾಗಾಣಿಕೆಯ ಚಿತ್ರ ಸಹಿತ ಪ್ರಕಟಗೊಂಡಿತ್ತು ಎಂದು ತಿಳಿಸಿದರು.
ಮಾಹಿತಿ ಸೋರಿಕೆಯು ಸರಕಾರವು ನೋಟು ರದ್ದತಿಯನ್ನು ತಾನು ಮೊದಲು ಯೋಜಿಸಿದ್ದಕ್ಕಿಂತ ಮೊದಲೇ ಘೋಷಿಸಲು ಕಾರಣವಾಗಿರಬಹುದು ಎಂದ ಅವರು,ಗೌಪ್ಯವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಇಂತಹ ವಿಷಯಗಳಲ್ಲಿ ಸಾಕಷ್ಟು ಮೊದಲೇ ಎಲ್ಲವನ್ನೂ ಯೋಜಿಸಲಾಗುವುದಿಲ್ಲ. ಅನುಷ್ಠಾನವು ನಿರೀಕ್ಷೆಯಂತೆ ತೆರೆದುಕೊಳ್ಳುತ್ತ ಹೋಗುವುದಿಲ್ಲ. ಪ್ರಕ್ರಿಯೆ ನಡೆಯುತ್ತಿರುವಂತೆಯೇ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ನೋಟು ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಗೌಪ್ಯವನ್ನು ಕಾಯ್ದುಕೊಳ್ಳ ಬೇಕಾದ ಅನಿವಾರ್ಯತೆಯಿಂದಾಗಿ ಸಂಪೂರ್ಣ ಪೂರ್ವತಯಾರಿ ಸರಕಾರಕ್ಕೆ ಕಠಿಣವಾಗಿತ್ತು. ಸರಕಾರದ ನಿರ್ಧಾರ ಜಾರಿಗೆ ಬಂದ ನಂತರವೂ ಎಷ್ಟೋ ಜನರು ಕಪ್ಪು-ಬಿಳಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಇಂತಹುದರಲ್ಲಿ ನೋಟು ನಿಷೇಧವನ್ನು ಮಾಡುತ್ತೇವೆ ಎಂದು ತಿಂಗಳ ಮೊದಲೇ ಪ್ರಕಟಿಸಿದ್ದಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಯಾರೂ ಊಹಿಸಬಹುದು ಎಂದರು.
ಆರ್ಥಿಕತೆಯಲ್ಲಿ ಹತಾಶೆಯ ಸ್ಪಷ್ಟ ಲಕ್ಷಣಗಳಿವೆಯಾದರೂ ಭವಿಷ್ಯದಲ್ಲಿ ಸರಕಾರದ ಈ ಕ್ರಮವು ಉತ್ತಮ ಫಲಗಳನ್ನು ನೀಡಲಿದೆ ಎಂದು ಪನಗಾರಿಯಾ ಹೇಳಿದರು.







