ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧ ನಡೆ
2ಜಿ, ಕಲ್ಲಿದ್ದಲು ಹಗರಣದ ತನಿಖಾಧಿಕಾರಿಯ ಹಠಾತ್ ಎತ್ತಂಗಡಿ

ಹೊಸದಿಲ್ಲಿ, ಡಿ.1: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಹಿರಿಯ ಸಿಬಿಐ ಅಧಿಕಾರಿ ಆರ್.ಕೆ.ದತ್ತಾ ಅವರನ್ನು ಗೃಹ ಸಚಿವಾಲಯದ ವಿಭಾಗವೊಂದಕ್ಕೆ ವರ್ಗಾಯಿಸಿರುವ ಕೇಂದ್ರ ಸರಕಾರದ ನಿರ್ಧಾರ ಅಧಿಕಾರಿ ವಲಯದಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿದೆ.
ದತ್ತಾ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ ಮತ್ತು 2 ಜಿ ತರಂಗಗುಚ್ಛಗಳ ಹರಾಜು ಪ್ರಕ್ರಿಯೆಯ ಹಗರಣದ ತನಿಖಾ ತಂಡದ ಉಸ್ತುವಾರಿ ವಹಿಸಿದ್ದರು . ಆದರೆ , ಈ ಎರಡು ಸೂಕ್ಷ್ಮ ಹಾಗೂ ಪ್ರಮುಖ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುತ್ತಿರುವ ಯಾವುದೇ ಸಿಬಿಐ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸರಕಾರದ ಈ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ, ಇದು ಸರಕಾರದ ನಿರ್ಧಾರವಾಗಿದ್ದು ಇದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿನ್ಹಾ ಇಂದು (ಡಿ.2ರಂದು) ನಿವೃತ್ತಿ ಹೊಂದಲಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ದತ್ತಾ ನಿರಾಕರಿಸಿದ್ದಾರೆ. ಆದರೆ ದತ್ತಾ ಅವರ ವರ್ಗಾವಣೆ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದು ಕಲ್ಲಿದ್ದಲು ಗಣಿ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ತಂಡದ ಓರ್ವ ಅಧಿಕಾರಿ ಹೇಳಿದ್ದಾರೆ. ಯಾರನ್ನಾದರೂ ವರ್ಗಾಯಿಸುವ ಮೊದಲು ತನ್ನ ಅನುಮತಿ ಪಡೆದಿರಬೇಕು ಎಂದು ಕೋರ್ಟ್ ತಿಳಿಸಿದೆ ಎಂದವರು ಹೇಳಿದ್ದಾರೆ. ದತ್ತಾ ತನಿಖಾ ತಂಡದ ಅಧಿಕಾರಿಯಲ್ಲ. ಮೇಲ್ವಿಚಾರಕ ಎಂಬುದು ಸರಕಾದ ವಾದವಾಗಿದೆ.
ದತ್ತಾ ಅವರು ಅನಿಲ್ ಸಿನ್ಹಾರ ನಿವೃತ್ತಿ ಬಳಿಕ ಆ ಹುದ್ದೆಗೆ ಭಡ್ತಿ ಹೊಂದುವ ನಿರೀಕ್ಷೆಯಲ್ಲಿದ್ದರು. ಸೇವಾ ಹಿರಿತನವನ್ನು ಪರಿಗಣಿಸಿದರೆ ಈ ಹುದ್ದೆ ದತ್ತಾರಿಗೇ ಸಿಗಬೇಕು. ಆದರೆ ಈಗ ದತ್ತಾ ಅವರನ್ನು 2017ರ ಅ.31ರವರೆಗೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಅ.31ರಂದು ದತ್ತಾ ನಿವೃತ್ತಿ ಹೊಂದಲಿರುವ ಕಾರಣ ಇವರು ಸಿಬಿಐ ಉನ್ನತ ಹುದ್ದೆಗೆ ಏರುವುದು ಬಹುತೇಕ ಅಸಂಭವವಾಗಿದೆ. ಗುಜರಾತ್ ಕ್ಯಾಡರ್‌ನ ಅಧಿಕಾರಿ ಆರ್.ಕೆ. ಅಸ್ತಾನಾ ಅವರು ಸಿಬಿಐ ನಿರ್ದೇಶಕ ಹುದ್ದೆಗೆ ಮೋದಿ ಸರಕಾರದ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.







