ಎಪ್ರಿಲ್‌ನಲ್ಲಿ ರಾಜೀನಾಮೆ ನೀಡಿ
ದಕ್ಷಿಣ ಕೊರಿಯ ಅಧ್ಯಕ್ಷೆಗೆ ಆಡಳಿತಾರೂಢ ಪಕ್ಷ ಸೂಚನೆ

ಸಿಯೋಲ್, ಡಿ. 1: ಮುಂದಿನ ವರ್ಷದ ಎಪ್ರಿಲ್‌ನಲ್ಲಿ ಅಧಿಕಾರದಿಂದ ಕೆಳಗಿಳಿಯುವಂತೆ ಭ್ರಷ್ಟಾಚಾರ ಹಗರಣದಲ್ಲಿ ಶಾಮೀಲಾಗಿರುವರೆನ್ನಲಾದ ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್-ಹೈ ಅವರಿಗೆ ಆಡಳಿತ ಪಕ್ಷ ಗುರುವಾರ ಸೂಚಿಸಿದೆ.
ಈ ಪ್ರಸ್ತಾಪದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಡಳಿತಾರೂಢ ಸೇನುರಿ ಪಾರ್ಟಿ ಅಧ್ಯಕ್ಷೆಗೆ ಒಂದು ವಾರದ ಕಾಲಾವಕಾಶ ನೀಡಿದೆ. ಪ್ರಸ್ತಾಪವನ್ನು ತಿರಸ್ಕರಿಸಿದರೆ ದೋಷಾರೋಪಣೆಯ ಸಾಧ್ಯತೆಯನ್ನು ಎದುರಿಸುವಂತೆ ಅದು ಎಚ್ಚರಿಸಿದೆ.
ವಿವಿಧ ಟ್ರಸ್ಟ್‌ಗಳಿಗೆ ದೇಶದ ಕಂಪೆನಿಗಳಿಂದ ದೇಣಿಗೆ ಸಂಗ್ರಹಿಸಲು ತನ್ನ ಸಹವರ್ತಿಯೊಬ್ಬರಿಗೆ ಅಧಿಕಾರ ನೀಡಿದ ಆರೋಪವನ್ನು ಅಧ್ಯಕ್ಷೆ ಎದುರಿಸುತ್ತಿದ್ದಾರೆ. ಆ ಸಹವರ್ತಿಯು ಅಧ್ಯಕ್ಷೆಯ ಪ್ರಭಾವವನ್ನು ಬಳಸಿ ಹಲವಾರು ಕಂಪೆನಿಗಳಿಂದ ಭಾರೀ ಪ್ರಮಾಣದಲ್ಲಿ ದೇಣಿಗೆ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎಪ್ರಿಲ್ ಕೊನೆಯ ವೇಳೆಗೆ ರಾಜೀನಾಮೆ ನೀಡುವಂತೆ ಅಧ್ಯಕ್ಷೆಯನ್ನು ಸೇನುರಿ ಪಕ್ಷದ 128 ಸಂಸದರು ಒತ್ತಾಯಿಸಿದ್ದಾರೆ. ಅದೇ ವೇಳೆ, ನಿಗದಿಗಿಂತ ಆರು ತಿಂಗಳ ಮುಂಚೆ, ಅಂದರೆ ಜೂನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಸಲೂ ಅವರು ಕರೆ ನೀಡಿದ್ದಾರೆ.





