ಸ್ವಿಸ್-ಭಾರತ ಸಮಾಲೋಚನೆ ಆರಂಭ
ಕಪ್ಪು ಹಣ ವಾಪಸ್
ಬರ್ನ್, ಡಿ. 1: ಕಪ್ಪು ಹಣ ಸಂಬಂಧಿ ಮಾಹಿತಿಯನ್ನು ಭಾರತ ಹಾಗೂ ಇತರ ದೇಶಗಳೊಂದಿಗೆ ಹಂಚಿಕೊಳ್ಳುವ ‘ಸ್ವಯಂಚಾಲಿತ ಮಾಹಿತಿ ವಿನಿಮಯ’ (ಎಇಒಐ) ಕಾರ್ಯಕ್ರಮದ ಜಾರಿಗೆ ಸಂಬಂಧಿಸಿದ ಶಾಸನಾತ್ಮಕ ಸಮಾಲೋಚನೆ ಪ್ರಕ್ರಿಯೆಯನ್ನು ಸ್ವಿಝರ್‌ಲ್ಯಾಂಡ್ ಇಂದು ಆರಂಭಿಸಿದೆ.
ಸಮಾಲೋಚನೆ ಪ್ರಕ್ರಿಯೆಯು 2017 ಮಾರ್ಚ್ 15ರವರೆಗೆ ಮುಂದುವರಿಯಲಿದೆ ಎಂದು ಸ್ವಿಝರ್‌ಲ್ಯಾಂಡ್‌ನ ಹಣಕಾಸು ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಕಾರ್ಯಕ್ರಮವು 2018 ಜನವರಿ 1ರಂದು ಜಾರಿಗೆ ಬರುವುದು ಹಾಗೂ ಮಾಹಿತಿ ವಿನಿಮಯವು 2019ರಲ್ಲಿ ಆರಂಭಗೊಳ್ಳುವುದು.
ಎಇಒಐ ಜಾರಿಗೆ ಸಂಬಂಧಿಸಿ ಭಾರತ ಮತ್ತು ಸ್ವಿಝರ್‌ಲ್ಯಾಂಡ್ ನವೆಂಬರ್ 22ರಂದು ಜಂಟಿ ಘೋಷಣೆಗೆ ಸಹಿ ಹಾಕಿದ್ದವು. ಅದರ ಮುಂದುವರಿದ ಭಾಗವಾಗಿ ಈಗ ಸಮಾಲೋಚನಾ ಪ್ರಕ್ರಿಯೆ ನಡೆಯುತ್ತಿದೆ.
ಇದೇ ರೀತಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿ ಸ್ವಿಝರ್‌ಲ್ಯಾಂಡ್ ಇಂದು ಅಂಡೋರ, ಅರ್ಜೆಂಟೀನ, ಬಾರ್ಬಡೋಸ್, ಬರ್ಮುಡ, ಬ್ರೆಝಿಲ್, ಬ್ರಿಟಿಶ್ ವರ್ಜಿನ್ ಐಲ್ಯಾಂಡ್ಸ್, ಕೇಮನ್ ಐಲ್ಯಾಂಡ್ಸ್, ಚಿಲಿ, ಫ್ಯಾರೋ ಐಲ್ಯಾಂಡ್ಸ್, ಗ್ರೀನ್‌ಲ್ಯಾಂಡ್, ಇಸ್ರೇಲ್, ಮಾರಿಶಸ್, ಮೆಕ್ಸಿಕೊ, ಮೊನಾಕೊ, ನ್ಯೂಝಿಲ್ಯಾಂಡ್, ಸ್ಯಾನ್ ಮರೀನೊ, ಸಿಶಲಿಸ್, ದಕ್ಷಿಣ ಆಫ್ರಿಕ, ಟರ್ಕಿ, ಕೇಕಾಸ್ ಐಲ್ಯಾಂಡ್ಸ್ ಮತ್ತು ಉರುಗ್ವೆಗಳ ಜೊತೆಗೂ ಮಾತುಕತೆ ಆರಂಭಿಸಿದೆ.





