ಮಿಮಿಕ್ರಿ ಕಲಾವಿದನ ಬಂಧನ
ಸಚಿವರ ಧ್ವನಿ ಅನುಕರಿಸಿ ಅಧಿಕಾರಿಗಳ ವರ್ಗಾವಣೆ!
ಮೆಟ್ಟೂರು, ಡಿ.1: ಸಚಿವರ ಧ್ವನಿ ಅನುಕರಿಸಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದ ಮಿಮಿಕ್ರಿ ಕಲಾವಿದನೊಬ್ಬ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ತಮಿಳುನಾಡು ವಿದ್ಯುತ್ ಖಾತೆ ಸಚಿವ ಪಿ.ತಂಗಮಣಿ ಅವರ ಧ್ವನಿಯನ್ನು ಅನುಕರಿಸಿ, ಸೇಲಂ ಜಿಲ್ಲೆಯ ಉಷ್ಣವಿದ್ಯುತ್ ಸ್ಥಾವರದ ಅಧಿಕಾರಿಯೊಬ್ಬರನ್ನು ವರ್ಗಾಯಿಸಿದ ಹಿನ್ನೆಲೆಯಲ್ಲಿ ಮೆಟ್ಟೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ದಿಂಡಿಗಲ್ ಮೂಲದ ಸಾವರಿ ಮುತ್ತು ಎಂಬಾತ ಇದುವರೆಗೆ 29 ಮಂದಿಯನ್ನು ಹೀಗೆ ವರ್ಗಾಯಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಕಳೆದ ವಾರ ಸಹಾಯಕ ಇಂಜಿನಿಯರ್ ಜಯಕುಮಾರ್ ಎಂಬವರನ್ನು ವಿದ್ಯುತ್ ಉತ್ಪಾದನಾ ಘಟಕದಿಂದ ಕಲ್ಲಿದ್ದಲು ನಿರ್ವಹಣೆ ವಿಭಾಗಕ್ಕೆ ವರ್ಗಾಯಿಸಿದಾಗ ಅನುಮಾನ ಉಂಟಾಗಿತ್ತು. ಸಚಿವರು ತಮ್ಮ ಜತೆ ಮಾತನಾಡಿದ್ದು, ವರ್ಗಾವಣೆ ಆದೇಶ ಜಾರಿಗೆ ಸೂಚಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದರು. ಆದರೆ ಸಚಿವ ತಂಗಮಣಿ ಅವರನ್ನು ಭೇಟಿ ಮಾಡಿ ಚರ್ಚಿಸಿದಾಗ ಸಚಿವರು ಯಾವುದೇ ಕರೆ ಮಾಡಿಲ್ಲ ಎನ್ನುವುದು ಜಯಕುಮಾರ್‌ಗೆ ಖಚಿತವಾಯಿತು. ತಕ್ಷಣ ಸಚಿವರು ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದರು. ಅಧಿಕಾರಿಗಳು ಮೆಟ್ಟೂರು ಪೊಲೀಸರ ನೆರವು ಯಾಚಿಸಿದರು. ವಿದ್ಯುತ್ ಘಟಕದ ಕರೆ ವಿವರಗಳನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸ್ ಮೂಲಗಳು ಹೇಳಿವೆ.





