ಸುಪ್ರೀಂಕೋರ್ಟ್ ತೀರ್ಪು ತನಕ ಕಾದುನೋಡಲು ಬಿಸಿಸಿಐ ನಿರ್ಧಾರ

ಹೊಸದಿಲ್ಲಿ, ಡಿ.2: ಲೋಧಾ ಸಮಿತಿ ಮಾಡಿರುವ ಕೆಲವು ಸುಧಾರಣೆಗಳ ಬಗ್ಗೆ ತನ್ನ ವಿರೋಧವನ್ನು ಮುಂದುವರಿಸಿರುವ ಬಿಸಿಸಿಐ ಈ ವಿಷಯಕ್ಕೆ ಸಂಬಂಧಿಸಿ ಡಿ.5 ರಂದು ಸುಪ್ರೀಂಕೋರ್ಟ್ ತೀರ್ಪು ನೀಡುವ ತನಕ ಕಾದು ನೋಡಲು ನಿರ್ಧರಿಸಿದೆ.
ಶುಕ್ರವಾರ ಇಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಿದ ಬಿಸಿಸಿಐ, ಲೋಧಾ ಸಮಿತಿ ಮಾಡಿರುವ ಶಿಫಾರಸಿನ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಉಚ್ಚ ನ್ಯಾಯಾಲಯ ಒಂದು ವೇಳೆ ತಮ್ಮ ವಿರುದ್ಧ ತೀರ್ಪು ನೀಡಿದರೆ, ಬಿ ಪ್ಲಾನ್ ಸಿದ್ಧಪಡಿಸುವಂತೆ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಎಲ್ಲ ಬಿಸಿಸಿಐ ಪದಾಧಿಕಾರಿಗಳನ್ನು ವಜಾಗೊಳಿಸಿ ಮಾಜಿ ಕೇಂದ್ರ ಕಾರ್ಯದರ್ಶಿ ಜಿಕೆ ಪಿಳ್ಳೈ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶ ನೀಡುವಂತೆ ಸುಪ್ರೀಂಕೋರ್ಟ್‌ಗೆ ಲೋಧಾ ಸಮಿತಿ ಮನವಿ ಸಲ್ಲಿಸುವ ಸಾಧ್ಯತೆಯಿದೆ.
‘‘ನಾವು ಡಿ.5ರ ತನಕ ಕಾದುನೋಡಲು ನಿರ್ಧರಿಸಿದ್ದೇವೆ. ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರ ಕೋರ್ಟ್‌ಗೆ ವಿರುದ್ಧವಾಗಬಹುದು. ರಾಜ್ಯ ಘಟಕಗಳು ಬಿ ಪ್ಲಾನ್‌ನ್ನು ಸಿದ್ಧಪಡಿಸಿಕೊಳ್ಳಬೇಕು. ನಾವು ನ್ಯಾಯಾಲಯ ನೀಡುವ ತೀರ್ಪಿಗೆ ತಲೆಬಾಗಬೇಕು. ಆದೇಶದನ್ವಯ ಬಿಸಿಸಿಐ ಸಂವಿಧಾನವನ್ನು ಬದಲಿಸಬೇಕು’’ ಎಂದು ಹಿರಿಯ ಪದಾಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ರಾಜ್ಯ ಘಟಕದ ಅಧಿಕಾರಿಗಳು ಪಿಟಿಐಗೆ ತಿಳಿಸಿದರು.
ಇದೇ ವೇಳೆ, ಎರಡು ಕ್ರಿಕೆಟ್ ಸಂಸ್ಥೆಗಳಾದ ತ್ರಿಪುರಾ ಹಾಗೂ ವಿದರ್ಭ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ನಿರ್ಧರಿಸಿವೆ.







