ಹೊಟೇಲ್‌ಗಳ ತ್ಯಾಜ್ಯ: ಜನವಸತಿ ಪ್ರದೇಶದಲ್ಲಿ ರೋಗದ ಭೀತಿ
ಮೂಡಿಗೆರೆ, ಡಿ.2: ಹೊಟೇಲ್‌ಗಳ ತ್ಯಾಜ್ಯ ಜನವವಸತಿ ಪ್ರದೇಶದಲ್ಲಿ ಹರಿಯುತ್ತಿರುವುದರಿಂದ ತೀವ್ರ ತರದ ದುರ್ನಾತ ಬೀರುತ್ತಿದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಗಳು ಆರೋಪಿಸಿದ್ದಾರೆ.
ಪಟ್ಟಣದ ಬಸ್‌ನಿಲ್ದಾಣದ ಹಿಂಭಾಗ ತತ್ಕೋಳ ರಸ್ತೆಗೆ ತಾಗಿಕೊಂಡಂತೆ ಕೆಲವು ಹೋಟೆಲ್‌ಗಳ ಕೊಳಚೆ ತ್ಯಾಜ್ಯವನ್ನು ಹಿಂಭಾಗದ ಚರಂಡಿಗೆ ಹರಿಯ ಬಿಡಲಾಗುತ್ತಿದೆ. ಇದರಿಂದ ತತ್ಕೋಳ ರಸ್ತೆಯ ಅಂತ್ಯದವರೆಗೂ ಅಕ್ಕಪಕ್ಕದ ಮನೆಗಳಿಗೆ ದುರ್ನಾತ ಹರಡಿ, ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿ ವಿವಿಧ
ಕಾಯಿಲೆಗಳಿಗೆ ಜನರು ತುತ್ತಾಗುವ ಅಪಾಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಪಂಗೆ ಹಲವಾರು ಬಾರಿ ವೌಖಿಕವಾಗಿ ದೂರು ನೀಡಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ,ಕಿಂಚಿತ್ತೂ ಗಮನ ಹರಿಸುತ್ತಿಲ್ಲ.
ಹೊಟೇಲ್‌ಗಳಿಗೆ ಪಪಂ ಪರವಾನಗಿ ನೀಡುವಾಗ ಕೆಲ ನಿಯಮಗಳನ್ನು ಪಾಲನೆ ಮಾಡುವಂತೆ ತಾಕೀತು ಮಾಡಲಾಗಿದ್ದರೂ, ಹೊಟೇಲ್‌ಗಳ ಮಾಲಕರು ಪರವಾನಗಿ ಶರತ್ತುಗಳನ್ನು ಪಾಲಿಸುತ್ತಿಲ್ಲ. ಒಂದೆಡೆ ಪಪಂ ಅಧ್ಯಕ್ಷೆ ರಮೀಝಾಬಿ ಹಾಗೂ ಅವರ ಪತಿ ಇಮ್ಪಿಯಾಝ್ ಅವರು ರಾತ್ರಿ ಹಗಲೆನ್ನದೆ ಪಟ್ಟಣದಾಧ್ಯಂತ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಇನ್ನೊಂದೆಡೆ ಇಂತಹ ದುರ್ನಾತಗಳು ನಿವಾಸಿಗಳನ್ನು ಕಂಗೆಡಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಿಸುತ್ತಿಲ್ಲ.
ಕೂಡಲೇ ಪಪಂ ಅಧಿಕಾರಿಗಳು ಚರಂಡಿಗೆ ಬಿಡುವ ಹೊಟೇಲ್‌ಗಳ ಕೊಳಚೆ ತ್ಯಾಜ್ಯಗಳಿಗೆ ಪೈಪ್ ಅಳವಡಿಸಿ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.







