ರಾಜ್ಯಗಳ ಅಧಿಕಾರ ಮೊಟಕು: ಬರಗೂರು ಕಳವಳ
ಸಮ್ಮೇಳನ ಅಧ್ಯಕ್ಷರ ಭಾಷಣ

ಜಾಗತೀಕರಣಕ್ಕೆ ತಾಯೀಕರಣವೇ ಪರಿಹಾರ
ಇಂದಿನ ಸಂದರ್ಭದಲ್ಲಿ ನಮ್ಮ ಸಾಹಿತ್ಯವು ಮತ್ತೊಮ್ಮೆ ಜನಪರಂಪರೆ ಯನ್ನು ಪ್ರಧಾನ ಗುಣ ಲಕ್ಷಣವಾಗಿಸಿಕೊಳ್ಳಬೇಕಾಗಿದೆ. ಜನ ಸಾಮಾನ್ಯರ ಸಂಕಷ್ಟದ ಕಾಲವಿದು. ರೈತರು, ಮಹಿಳೆಯರು, ದಲಿತರು, ಕಾರ್ಮಿಕರು, ಎಲ್ಲ ಬಡವರು ವಿವಿಧ ಪ್ರಮಾಣದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಭಯೋತ್ಪಾದನೆ, ಯುದ್ಧೋತ್ಪಾದನೆ ಗಳಷ್ಟೇ ಹಿಂಸೆಯಾಗದೆ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೇ ಹಿಂಸೆ ಅಂತರ್ಗತವಾಗಿ ಬಿಟ್ಟಿದೆ. ವ್ಯವಸ್ಥೆಯೊಳಗಿನ ಹಿಂಸೆಯು ಜಾತಿಯಾಗಿ, ವರ್ಣವಾಗಿ, ವರ್ಗವಾಗಿ ಲಿಂಗವಾಗಿ ಅಂಗಾಂಗಗಳನ್ನೂ ಅಣ್ವಸ್ತ್ರವಾಗಿಸಿ ಬಿಟ್ಟಿದೆ. ಆದ್ದರಿಂದ ಇಂದು ಸಾಮಾಜಿಕ ಆರ್ಥಿಕ ವ್ಯವಸ್ಥೆಯಿಂದ ವಿಮೋಚನೆಗೊಳಿಸಲು ಹೊಸ ಪರ್ಯಾಯಗಳೂ ಬೇಕಾಗಿವೆ ಎಂದು ನನಗನ್ನಿಸುತ್ತದೆ.-ತಾಯ್ತನ ಈಗ ನಮ್ಮ ಪ್ರತೀಕವಾಗಬೇಕು. ತಾಯಿಗೆ ತನ್ನ ಮಕ್ಕಳೆಲ್ಲರೂ ಸಮಾನ. ಗಂಡಾಗಲಿ ಹೆಣ್ಣಾಗಲಿ, ಹಿರಿಯರಾಗಲಿ ಕಿರಿಯರಾಗಲಿ ಭೇದ ಭಾವವಿಲ್ಲದ ಒಂದೇ ಮನೋಭಾವ. ಮನೆಯ ಪಡಸಾಲೆ, ಹಜಾರ, ಅಡುಗೆಮನೆ ಬಚ್ಚಲು, ಹಿತ್ತಲು-ಎಲ್ಲ ಪ್ರದೇಶಗಳ ಬಗ್ಗೆಯೂ ತಾಯಿಯದು ಸಮಾನ ದೃಷ್ಟಿ. ಆದ್ದರಿಂದ ನಮ್ಮ ಸಮಾಜಕ್ಕೆ ತಾಯ್ತನ ಬೇಕು. ಸರಕಾರಕ್ಕೆ ತಾಯ್ತನ ಬೇಕು. ಸಾಹಿತ್ಯ - ಸಂಸ್ಕೃತಿಗೆ ತಾಯ್ತನ ಬೇಕು. ನಾವೆಲ್ಲ ತಾಯೀಕರಣಗೊಳ್ಳಬೇಕು. ತಾಯಿಯೆಂದರೆ ಮಮತೆ ಮತ್ತು ಸಮತೆ. ಈ ಸಮತಾಮಯಿ ತಾಯಿ ಸಂಕಟಪಡುತ್ತಾಳೆ; ಸಂತಳಾಗುತ್ತಾಳೆ; ಸಿಟ್ಟಾಗುತ್ತಾಳೆ; ಸ್ಫೋಟಿಸುತ್ತಾಳೆ. ಅಂತಃಕರಣವಾ ಗುತ್ತಾಳೆ. ಜಾತೀಕರಣ ಮತ್ತು ಜಾಗತೀಕರಣಕ್ಕೆ ಎದುರಾಗುವ ‘ತಾಯೀಕರಣ’ವಾಗುತ್ತಾಳೆ.
ರಾಯಚೂರು,ಡಿ.2: ಇಂದು ರಾಜ್ಯಗಳು ಸಂಯುಕ್ತ ಭಾರತದ ಭಾಗ ವಾಗುವ ಬದಲು ಕೇಂದ್ರ ಸರಕಾರದ ತೋರುಬೆರಳ ದಾರಿಯಲ್ಲಿ ಸಾಗುವ ಪಾದಚಾರಿಗಳಾಗುತ್ತಿವೆ ಎಂದು 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತ ಪಡಿಸಿದ್ದಾರೆ.
ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದ ಅವರು, ಹಂತಹಂತ ವಾಗಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ರಾಜ್ಯಗಳ ಯೋಜನೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಸ್ಥಾಪನೆಯಾಗಿದ್ದ ಯೋಜನಾ ಆಯೋಗವನ್ನು ವಿಸರ್ಜಿಸಲಾಗಿದೆ. ರಾಜ್ಯ ಸರಕಾರಗಳು ತಮ್ಮ ಅಭಿಪ್ರಾಯ ಗಳನ್ನು ಮಂಡಿಸಲು ಇದ್ದ ‘ರಾಷ್ಟ್ರೀಯ ಅಭಿವೃದ್ಧಿ ಮಂಡಳಿ’ಯನ್ನು ನಿರ್ಜೀವ ಗೊಳಿಸಲಾಗಿದೆ. ಸಂವಿಧಾನದ 263ನೆ ಪರಿಚ್ಛೇದದ ಪ್ರಕಾರ ಇರುವ ಅಂತಾರಾಜ್ಯ ಮಂಡಳಿಯ ಸಭೆಗಳು ಸಹ ಸರಿಯಾಗಿ ನಡೆಯುತ್ತಿಲ್ಲವೆಂಬ ಆಕ್ಷೇಪವಿದೆ. ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ನೀತಿಗಳಿಂದ ಅಧಿಕಾರ ಮೊಟಕಾಗುವುದು ಮತ್ತು ಆರ್ಥಿಕ ಶಕ್ತಿ ಕುಗ್ಗುವುದಷ್ಟೇ ಸಮಸ್ಯೆ ಯಲ್ಲ. ಶೈಕ್ಷಣಿಕವಾಗಿ, ಭಾಷಿಕವಾಗಿ, ಸಾಂಸ್ಕೃತಿಕವಾಗಿ ಸಮಸ್ಯೆಗಳುಎದುರಾಗುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಯೆನ್ನುವುದು ಕೇಂದ್ರೀಕೃತ ಪದ್ಧತಿಗೆ ವಿರುದ್ಧವಾದುದು ಎಂಬ ವಿವೇಕದಿಂದ ನಡೆದುಕೊಳ್ಳಬೇಕು. ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗದ ಸಮತೋಲ ನದ ಅಗತ್ಯವಿದೆ. ಒಟ್ಟಾರೆಯಾಗಿ ರಾಜ್ಯಗಳ ಸ್ವಾಯತ್ತತೆ ಮತ್ತು ರಾಜ್ಯಗಳೊಳಗಿನ ಸ್ವಾಯತ್ತತೆ-ಎರಡೂ ಮುಖ್ಯವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮಾತೃಭಾಷೆ-ರಾಜ್ಯಭಾಷೆ: ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವಂತೆ ಪ್ರಾಥಮಿಕ ಶಿಕ್ಷಣದ ಬೋಧನಾ ಮಾಧ್ಯಮದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ನಿಜಕ್ಕೂ ಆಘಾತಕಾರಿ. ಇಡೀ ರಾಷ್ಟ್ರದಲ್ಲಿಯೇ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮಕ್ಕೆ ಅವಕಾಶವಾಗುವಂತೆ ಸಂವಿಧಾನದ ತಿದ್ದುಪಡಿಗೆ ಪ್ರಯತ್ನಿಸುವುದು ಮುಖ್ಯ. ಈ ದಿಕ್ಕಿನಲ್ಲಿ ವಿವಿಧ ರಾಜ್ಯಗಳ ಸಮಾನ ಮನಸ್ಕರು ಸಂಘಟಿತರಾಗಬೇಕು ಎಂದು ಬರಗೂರು ಕರೆ ನೀಡಿದರು.
ಸರಕಾರವು ಕೂಡಲೇ ಕೈಗೆತ್ತಿಕೊಳ್ಳಬೇಕಾದ ಕೆಲಸವೆಂದರೆ- ಸರಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣ. ಇವತ್ತಿನ ಶಿಕ್ಷಣ ಪದ್ಧತಿಯ ಪ್ರಕಾರ ಅಂಗನವಾಡಿಯಿಂದಲೇ ಅಸಮಾನತೆ ಆರಂಭವಾಗುತ್ತದೆ. ಈ ಹಂತದಲ್ಲೇ ಮೇಲು-ಕೀಳುಗಳು ಹುಟ್ಟಿಕೊಳ್ಳುತ್ತವೆ. ಬಡವರಿಗೊಂದು, ಬಲ್ಲಿದರಿಗೊಂದು ಎಂಬಂತೆ ಸರಕಾರಿ ಶಾಲೆ-ಖಾಸಗಿ ಶಾಲೆ, ಕನ್ನಡ ಮಾಧ್ಯಮ-ಇಂಗ್ಲಿಷ್ ಮಾಧ್ಯಮ ಎಂಬ ರೀತಿಯಲ್ಲಿ ಶಿಕ್ಷಣ ವಿಧಾನ ವಿಂಗಡನೆಯಾಗಿದೆ. ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕಾದಂತಹ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಡಳಿತಾತ್ಮಕ ಸುಧಾರಣೆಗಳನ್ನೇ ಶೈಕ್ಷಣಿಕ ಸುಧಾರಣೆ ಗಳೆಂದು ಭ್ರಮಿಸಿದವರ ಬೌದ್ಧಿಕ ರಾಜಕಾರಣಕ್ಕೆ ಉನ್ನತ ಶಿಕ್ಷಣ ಬಲಿಯಾಗುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.
ಸಮಾನ ಶಿಕ್ಷಣ ನೀತಿ ಬರಗೂರು ಕಣ್ಣಲ್ಲಿ...
1. ವಿವಿಧ ಮಾದರಿ ಶಾಲೆಗಳನ್ನು ಬಿಡಿ ಬಿಡಿಯಾಗಿ ಸ್ಥಾಪಿಸಿ ಮಕ್ಕಳಲ್ಲಿ ತಾರತಮ್ಯ ಮಾಡುವ ಬದಲು ಪ್ರತಿ ಗ್ರಾಮಪಂಚಾಯತ್‌ಗೊಂದು ಸುಸಜ್ಜಿತ ಹಾಗೂ ಸಮಸ್ತ ಸೌಲಭ್ಯಗಳುಳ್ಳ ಏಕರೂಪದ ಮಾದರಿ ಶಾಲೆಯನ್ನು ಸ್ಥಾಪಿಸಬೇಕು. ಈ ಶಾಲೆಯು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಒಳಗೊಂಡಿರಬೇಕು. ಉಳಿದ ಹಳ್ಳಿಗಳಲ್ಲಿ ಅಗತ್ಯಕ್ಕನುಗುಣವಾಗಿ ಕಿರಿಯ ಪ್ರಾಥಮಿಕ ಶಾಲೆಗಳಿರಬೇಕು. ಗ್ರಾಮಪಂಚಾಯತ್‌ಗೊಂದು ಇರುವ ಸುಸಜ್ಜಿತ ಶಾಲೆಗೆ ಹತ್ತಿರದ ಊರುಗಳಿಂದ ಮಕ್ಕಳು ಬರಲು ವಾಹನ ವ್ಯವಸ್ಥೆ ಮಾಡಬೇಕು. ನಗರ ಮತ್ತು ಪಟ್ಟಣಗಳಲ್ಲಿ ಪ್ರತಿ ವಾರ್ಡಿಗೊಂಡು ಇಂತಹ ಶಾಲೆಯನ್ನು ಸ್ಥಾಪಿಸಬೇಕು. ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಿ ಸಮಾನ ಶಿಕ್ಷಣಕ್ಕೆ ಬುನಾದಿ ಹಾಕಬೇಕು. ಶಿಕ್ಷಣದ ಹೊಣೆ ಪೂರ್ಣವಾಗಿ ಶಿಕ್ಷಣ ಇಲಾಖೆಯದಾಗಿರಬೇಕು.
2. ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೆ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು. ಕನ್ನಡೇತರ ಶಾಲೆಗಳಲ್ಲಿ ಕನ್ನಡ ಒಂದು ಕಡ್ಡಾಯ ವಿಷಯವಾಗಬೇಕು. 3. ಬಹುಮುಖ್ಯವಾಗಿ, ಸರಕಾರವು ಪ್ರಾಥಮಿಕ ಪೂರ್ವ ಶಾಲೆಗಳನ್ನು ಸ್ಥಾಪಿಸಬೇಕು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಅಂಗನವಾಡಿಗಳನ್ನು ಪ್ರಾಥಮಿಕ ಪೂರ್ವ ಶಾಲೆಗಳಾಗಿ ರೂಪಾಂತರಿಸಿ ಕ್ರಮಬದ್ಧಗೊಳಿಸುವಂತೆ ಮಾಡಿದ ಶಿಫಾರಸಿಗೆ ಅಂದಿನ ಸರಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ‘ಎಲ್.ಕೆ.ಜಿ., ಯು.ಕೆ.ಜಿ.ಯಂತೆ ಪ್ರಾಥಮಿಕ ಪೂರ್ವ ಶಾಲೆಗಳನ್ನು ಆರಂಭಿಸಿ ಆನಂತರ ಒಂದನೆ ತರಗತಿಯಿಂದ ಮಾತೃಭಾಷೆ ಅಥವಾ ರಾಜ್ಯಭಾಷಾಮಾಧ್ಯಮದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಿದರೆ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಾಕಷ್ಟು ಕೊಡುಗೆ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನೂ ಒದಗಿಸಬೇಕು. ಎಲ್.ಕೆ.ಜಿ; ಯು.ಕೆ.ಜಿ. ಮತ್ತು ಸರಕಾರಿ ಪ್ರಾಥಮಿಕ ಪೂರ್ವ ಶಾಲೆಗಳಿಗೆ ಏಕರೂಪದ ಹೊಸ ಕಾಯ್ದೆ ರೂಪಿಸಬೇಕು.
4. ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗುವುದರ ಜೊತೆಗೆ ಯಾವುದೇ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡುವ ಕುರಿತು ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕು. ಈ ವಿಷಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು, ಕನ್ನಡ ಕಾರ್ಯಕ್ರಮಗಳ ಆಯೋಜನೆ, ಕನ್ನಡ ಸಾಂಸ್ಕೃತಿಕ ಸಾಧಕರೊಂದಿಗೆ ಸಂವಾದ, ಕನ್ನಡ ರಾಜ್ಯೋತ್ಸವದ ಕಡ್ಡಾಯ ಆಚರಣೆ, ಕನ್ನಡ ಭಾಷಾಧಾರಿತ ವಿವಿಧ ಸ್ಪರ್ಧೆ ಇತ್ಯಾದಿಗಳನ್ನು ಇಂತಿಷ್ಟು ನಡೆಸಬೇಕೆಂಬ ನಿಯಮಾವಳಿಯು ಶಾಲಾ ಮಂಜೂರಾತಿಯ ಭಾಗವಾಗಬೇಕು. ಹೀಗೆ ಕನ್ನಡ ಪರಿಚಯ ಮತ್ತು ಪರಿಸರವನ್ನು ಕಾಪಾಡುವ ಕೆಲಸವಾಗಬೇಕು. 5.ಪ್ರಾಥಮಿಕ ಶಿಕ್ಷಣದಲ್ಲಿ ವಿಷಯವಾರು ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು, ಪ್ರಾಥಮಿಕ ಶಿಕ್ಷಣವನ್ನು ಅನಗತ್ಯ ಪ್ರಯೋಗಗಳ ಬಲಿಪೀಠದ ಮೇಲೆ ಪ್ರತಿಷ್ಠಾಪಿಸಬಾರದು. 6.ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರು ಚಿಂತನೆ ನಡೆದು ‘ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ’ ಎಂಬ ಪರಿಕಲ್ಪನೆಯನ್ನು ಗಂಭೀರ ವಾಗಿ ಪರಿಗಣಿಸಬೇಕಾಗಿದೆ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು.







