ಇದು ಆರ್‌ಬಿಐ ಗವರ್ನರ್‌ರ ವೈಫಲ್ಯವಲ್ಲವೇ?
ಮಾನ್ಯರೆ,
ನೋಟು ರದ್ದತಿಯಾಗಿ ಈಗ ಮೂರು ವಾರವಾಯಿತು. ಸಂಪೂರ್ಣ ಭಾರತ ಗೊಂದಲಮಯವಾಗಿದೆ, ನೋಟು ಬದಲಾವಣೆಯ ಅಸ್ತವ್ಯಸ್ತತೆಯಿಂದ ದೇಶದ ಎಲ್ಲಾ ನಾಗರಿಕರೂ ರೋಸಿ ಹೋಗಿದ್ದಾರೆ. ಆದರೆ ನೋಟು ಮುದ್ರಣದ ಸ್ಥಿತಿ ಹೇಗಿದೆ? ಒಟ್ಟು ಸೆಕ್ಯೂರಿಟಿ ಮುದ್ರಣಾಲಯಗಳ ಪ್ರತಿ ದಿನದ ನೋಟು ಮುದ್ರಣ ಸಾಮರ್ಥ್ಯ ಎಷ್ಟು? 15 ಲಕ್ಷ-ಕೋಟಿ ಹೊಸ ನೋಟು ಮುದ್ರಣವಾಗಬೇಕಾದರೆ ಎಷ್ಟು ತಿಂಗಳು ಬೇಕಾಗುತ್ತದೆ? ಎಂಬ ವಿವರಗಳನ್ನು ದೇಶದ ಜನತೆಗೆ ನೇರವಾಗಿ ತಿಳಿಸಬೇಕಾದ ಹೊಣೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲರದ್ದೇ ಹೊರತು ಅದು ವಿತ್ತ ಸಚಿವ ಜೇಟ್ಲಿಯವರ ಹೊಣೆಯಲ್ಲ.
ಹಾಗಿದ್ದರೂ ಇಂತಹ ದೊಡ್ಡ ಪ್ರಜಾಪ್ರಭುತ್ವದಲ್ಲಿ ಈ ಹೊಸ ಆರ್‌ಬಿಐ ಗವರ್ನರ್ ತಮ್ಮ ಹೊಣೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿ ಮೌನವಾಗಿರುವುದನ್ನು ನೋಡಿದರೆ ಅವರು ಸ್ವಸ್ಥರಾಗಿ ಇರುವರೇ ಎಂಬ ಅನುಮಾನ ಜನರಿಗೆ ಮೂಡುವುದು ಸಹಜ. ದೇಶ ಎದುರಿಸುತ್ತಿರುವ ಇಂತಹ ಕಠಿಣ ಹಾಗೂ ಸಂದಿಗ್ಧ ಸಮಯದಲ್ಲಿ ತನ್ನ ಜವಾಬ್ದಾರಿ ನಿಭಾಯಿಸದ ಆರ್‌ಬಿಐ ಗವರ್ನರ್ ನಮಗೆ ಬೇಕೇ? ಇಷ್ಟೊಂದು ಅದಕ್ಷ ಆರ್‌ಬಿಐ ಗವರ್ನರರ ಬದಲಾವಣೆಗೆ ವಿರೋಧ ಪಕ್ಷಗಳು ಯಾಕೆ ಒತ್ತಾಯಿಸುತ್ತಿಲ್ಲ?
ಈಗಿನ ಎಲ್ಲಾ ನೋಟು ಮುದ್ರಣಾಲಯಗಳು ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡಿದರೂ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಬೇಕಾದರೆ ನಾಲ್ಕೈದು ತಿಂಗಳು ಬೇಕಾಗುತ್ತವೆ ಎಂದು ವಿತ್ತ ಸಚಿವರೇ ಹೇಳಿರುವಾಗ ನಿಯಮದ ಪ್ರಕಾರ ಆರ್‌ಬಿಐ ಗವರ್ನರ್ ನೈಜ ಸ್ಥಿತಿಯ ಬಗ್ಗೆ ದೇಶದ ಜನತೆಗೆ ಅಧಿಕೃತ ವಿವರ ಕೊಡಲು ಬಾಧ್ಯಸ್ಥರು ಎಂದು ವಿರೋಧ ಪಕ್ಷಗಳು ಯಾಕೆ ಒತ್ತಾಯಿಸುತ್ತಿಲ್ಲ?







