ಕ್ಯಾಶ್ ಲೆಸ್ ವ್ಯವಸ್ಥೆಯಲ್ಲಿ ಬ್ಯಾಂಕಲ್ಲೇ ಮಗು ಡೆಲಿವರಿ !
ಸರತಿ ಸಾಲಲ್ಲಿ ನಿಂತಿದ್ದ ಗರ್ಭಿಣಿ

ಲಕ್ನೌ, ಡಿ.3: ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದರ ಝಿಂಝಕ್ ಶಾಖೆಯೊಂದರೊಳಗೆ ತನ್ನ ಅತ್ತೆಯೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದ ತುಂಬು ಗರ್ಭಿಣಿಯೊಬ್ಬಳು ಬ್ಯಾಂಕಿನೊಳಗಡೆಯೇ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ವರದಿಯಾಗಿದೆ. ಆಕೆ ತನ್ನ ಖಾತೆಯಿಂದ ಹಣ ಹಿಂಪಡೆಯಲು ಸರತಿಯಲ್ಲಿ ನಿಂತಿದ್ದಳು.
ಆಕೆ ತೀವ್ರ ಹೆರಿಗೆ ನೋವಿನಿಂದ ಬಳಲು ಆರಂಭಿಸಿದಾಗ ಅಂಬುಲೆನ್ಸ್ ಒಂದಕ್ಕೆ ಕರೆ ಕಳುಹಿಸಲಾಯಿತಾದರೂ ಅದು ಅಲ್ಲಿಗೆ ಸಮಯಕ್ಕೆ ಸರಿಯಾಗಿ ಬಾರದೇ ಇದ್ದ ಕಾರಣ ಬ್ಯಾಂಕಿನಲ್ಲಿದ್ದ ಇತರ ಮಹಿಳೆಯರು ಆಕೆಯ ಸುಖ ಪ್ರಸವಕ್ಕೆ ನೆರವಾದರು.
ಸರ್ವೇಶ (30) ಎಂಬ ಹೆಸರಿನ ಈ ಮಹಿಳೆ ಎರಡು ದಿನಗಳಲ್ಲಿ ಎರಡನೇ ಬಾರಿ ಬ್ಯಾಂಕಿಗೆ ಬಂದಿದ್ದಳು. ಅವಳು ಗುರುವಾರ ಬ್ಯಾಂಕಿಗೆ ಬಂದು ಹಣ ಹಿಂಪಡೆಯಲು ವಿಫಲವಾದ ನಂತರ ಶುಕ್ರವಾರ ಬೆಳಗ್ಗೆ ಮತ್ತೆ ಬಂದಿದ್ದಳು. ಸಂಜೆ ನಾಲ್ಕು ಗಂಟೆಯ ತನಕವೂ ಆಕೆ ಸರತಿ ಸಾಲಿನಲ್ಲಿದ್ದು ನಂತರ ಹೆರಿಗೆ ನೋವು ಅನುಭವಿಸಿದ್ದಳು.
ಆಕೆಯ ಪತಿ ಆಶ್ವೇಂದ್ರ ಸೆಪ್ಟಂಬರ್ ತಿಂಗಳಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದು ಸರಕಾರ ಆಕೆಗೆ ಕೊಡ ಮಾಡಿದ ಪರಿಹಾರದ ಪ್ರಥಮ ಕಂತಾದ ರೂ 2.75 ಲಕ್ಷ ಪಡೆಯಲು ಆಕೆ ಬ್ಯಾಂಕಿಗೆ ಬಂದಿದ್ದಳು. ಪರಿಹಾರಾರ್ಥವಾಗಿ ಸರಕಾರ ಆಕೆಗೆ ಮನೆಯೊಂದನ್ನೂ ಮಂಜೂರುಗೊಳಿಸಿತ್ತು.







