ಮಾವೋವಾದಿಗಳನ್ನು ಗುಂಡಿಟ್ಟು ಕೊಲ್ಲುವುದಲ್ಲ, ತಿದ್ದಬೇಕು: ವಿಎಸ್ ಅಚ್ಯುತಾನಂದನ್

ತಿರುವನಂತಪುರಂ,ಡಿ. 3: ಮಾವೋವಾದಿಗಳನ್ನು ಗುಂಡಿಟ್ಟು ಸಾಯಿಸುವುದಲ್ಲ ಬದಲಾಗಿ ಅವರನ್ನುತಿದ್ದಬೇಕೆಂದು ಕೇರಳದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆಂದು ವರದಿಯಾಗಿದೆ. ನಿಲಂಬೂರ್ ನಕ್ಸಲರ ಎನ್‌ಕೌಂಟರ್ ಹಿನ್ನೆಲೆಯಲ್ಲಿ ವಿಎಸ್ ತನ್ನ ನಿಲುವನ್ನು ಹೀಗೆ ಪ್ರಕಟಿಸಿದ್ದಾರೆ. ಈ ಹಿಂದೆ ಈವಿಷಯದಲ್ಲಿ ಮುಖ್ಯಮಂತ್ರಿ ಪಿಣರಾಯಿವಿಜಯನ್‌ಗೆ ಅಚ್ಯುತಾನಂದನ್ ಪತ್ರ ಬರೆದಿದ್ದರು.
ಪತ್ರದಲ್ಲಿ ನಿಲಂಬೂರಿನ ಎನ್‌ಕೌಂಟರ್ ಹತ್ಯೆಯನ್ನು ವಿಎಸ್ ಖಂಡಿಸಿದ್ದರು. ಪತ್ರದ ಕುರಿತು ಪಿಣರಾಯಿ ವಿಜಯನ್ ನೇರ ಪ್ರತಿಕ್ರಿಯೆ ನೀಡಿಲ್ಲವಾದರೂ ಪರೋಕ್ಷ ಉತ್ತರವನ್ನು ನೀಡಿದ್ದರು. ಪೊಲೀಸರ ಮನೋಸ್ಥೈರ್ಯ ಕೆಡಿಸುವ ಕೆಲಸಕ್ಕೆ ಸರಕಾರ ಇಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದರು. ನಿಲಂಬೂರ್ ಮಾವೋವಾದಿ ಎನ್‌ಕೌಂಟರ್ ಕುರಿತು ಯುಡಿಎಫ್‌ನ ಇತರ ಪಕ್ಷಗಳಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ನವೆಂಬರ್ 24ಕ್ಕೆ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಿಲಂಬೂರ್ ಅರಣ್ಯದಲ್ಲಿ ಘರ್ಷಣೆ ನಡೆದು ನಕ್ಸಲರಾದ ಕುಪ್ಪುದೇವರಾಜ್, ಮತ್ತು ಅಜಿತಾ ಹತ್ಯೆಯಾಗಿದ್ದರು ಎಂದು ವರದಿತಿಳಿಸಿದೆ.





