ಬೆಳಗಾವಿ ವಿಭಾಗೀಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ

ಭಟ್ಕಳ,ಡಿ.3: ಬೆಳಗಾವಿ ವಿಭಾಗದ ಪ್ರಾಥಮಿಕ, ಪ್ರೌಢಶಾಲೆಗಳ ಥ್ರೋಬಾಲ್ ಪಂದ್ಯಾವಳಿಗೆ ಶನಿವಾರ ಇಲ್ಲಿನ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ರಂಗುರಂಗಿನ ಚಾಲನೆ ದೊರೆಯಿತು.
ಒಲಂಪಿಕ್ ದ್ವಜಾರೋಹಣ ಮಾಡುವುದರ ಮೂಲಕ ಉತ್ತರಕನ್ನಡ ಜಿಲ್ಲಾಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್ ವಿಭಾಗೀಯ ಥ್ರೋಬಾಲ್ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬೆಳಗಾವಿ ವಿಭಾಗೀಯ ಮಟ್ಟದ ಕ್ರೀಡೆಗಳು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ತಾಲೂಕು ಪಂಚಾಯತ್ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯೊಂದಿಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು.
ಉತ್ತರಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವದ ಬೆಳವಣೆಗೆ ಕ್ರೀಡೆ ಅತ್ಯವಶ್ಯಕ, ವಿದ್ಯಾರ್ಥಿಗಳು ಸ್ಪರ್ಧಾಮನೋಭಾವದಿಂದ ಆಟಗಳಲ್ಲಿ ಭಾಗವಹಿಸದೆ ಇನ್ನೂ ಕೆಲವರು ತಮ್ಮಲ್ಲಿ ರೋಗಗಳನ್ನು ದೂರವಿಟ್ಟುಕೊಳ್ಳಲು ಬಲವಂತವಾಗಿ ಆಟಗಳನ್ನು ಆಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದ ಅವರು ಬೆಳಗಾವಿ ವಿಭಾಗದ 432 ವಿದ್ಯಾರ್ಥಿಗಳು, 50 ಮಂದಿ ನಿರ್ಣಯಕರು ಭಾಗವಹಿಸಿದ್ದು ಒಟ್ಟು 32 ತಂಡಗಳು ಭಾಗವಹಿಸಿ ಇಲ್ಲಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದರು.
ನ್ಯೂ ಇಂಗ್ಲಿಷ್ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಶಿಕ್ಷಕರಾದ ಪರಮೇಶ್ವರ ನಾಯ್ಕ, ಮಂಜುಳಾ ಶಿರೂರಕರ್ ಕಾರ್ಯಕ್ರಮ ನಿರೂಪಿಸಿದರು. ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ಧನ್ಯವಾದ ಅರ್ಪಿಸಿದರು.
ಜಿ.ಪಂ.ಸದಸ್ಯೆ ಸಿಂಧೂ ಭಾಸ್ಕರ್ ನಾಯ್ಕ, ತಾ.ಪಂ ಉಪಾಧ್ಯಕ್ಷೆ ರಾಧಾ ವೈದ್ಯ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಈಶ್ವರ್ ನಾಯ್ಕ, ತಾ.ಪಂ.ಸ್ಥಾಯಿಸಮಿತಿ ಅಧ್ಯಕ್ಷ ವಿಷ್ಣುದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.







