ಜಾತಿ, ಧರ್ಮ ಮೀರಿದ ಮೌಲ್ಯಗಳ ಬರಹ ಅಗತ್ಯ : ಅಬ್ದುಲ್ ಹೈ ತೋರಣಗಲ್ಲು
ಸುವಿಚಾರ ಪ್ರಕಾಶನ ಉದ್ಘಾಟನೆ

ಪುತ್ತೂರು,ಡಿ.3: ಯುವ ಬರಹಗಾರರಿಂದ ಜಾತಿ, ಧರ್ಮ ಮೀರಿದ ಮೌಲ್ಯಗಳ ಬರಹಗಳು ಹೊರಬಂದಾಗ ಬರವಣಿಗೆಯ ಮಹತ್ವ ಉಳಿಯುತ್ತದೆ ಎಂದು ಹಿರಿಯ ಸಾಹಿತಿ ಅಬ್ದುಲ್ ಹೈ ತೋರಣಗಲ್ಲು ಬಳ್ಳಾರಿ ಹೇಳಿದರು.
ಅವರು ಶನಿವಾರ ಸಂಜೆ ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಸುವಿಚಾರ ಪ್ರಕಾಶನ ಇದರ ಉದ್ಘಾಟನಾ ಸಮಾರಂಭ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬರಹದ ಮೂಲ ಮತ್ತು ವಸ್ತುಗಳು ಸಮಾಜದ ಪರವಾಗಿರಬೇಕು ಎಂದ ಅವರು ಕನ್ನಡ ಸಾಹಿತ್ಯ ಕೃಷಿಗಾಗಿ ಹುಟ್ಟಿಕೊಂಡಿರುವ ಸುವಿಚಾರ ಪ್ರಕಾಶನದಲ್ಲಿ ಎಲ್ಲರನ್ನೂ ಮನುಷ್ಯರನ್ನಾಗಿ ರೂಪಿಸುವ ಪುಸ್ತಕಗಳು ಹುಟ್ಟಿಕೊಳ್ಳಬೇಕು. ಬರವಣಿಗೆಯ ಮಹತ್ವವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮುಖ್ಯ ಭಾಷಣ ಮಾಡಿದ ಸವಣೂರು ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಅವರು ಬರಹಗಾರನ ಆತ್ಮಸಾಕ್ಷಿಗೆ ಪೂರಕವಾಗಿ ನಿರ್ಭೀತ ಬರಹಗಳು ಮೂಡಿ ಬರಬೇಕು. ನಮ್ಮ ಭಾವನೆಗಳನ್ನು ಅದುಮಿಟ್ಟು ಇನ್ಯಾರದ್ದೋ ಭಾವನೆಯನ್ನು ವ್ಯಕ್ತಪಡಿಸುವುದು ಅಪಾಯ. ಓದಬೇಕಾದ್ದನ್ನೇ ಬರೆಯಬೇಕಾದದ್ದು ಅಗತ್ಯ ಎಂದರು. ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ ಮಾತನಾಡಿ ಅಕ್ಷರಗಳಿಗೆ ಭಾವನೆಗಳನ್ನು ಹೊರ ಹಾಕುವ ಸಾಮರ್ಥ್ಯವಿದೆ. ಈ ಸಾಮರ್ಥ್ಯವೇ ಕೃತಿ ರಚನೆಗೆ ಪೂರಕವಾಗಿದೆ. ಹೆಚ್ಚು ಓದುವುದರಿಂದರಿಂದ ಪ್ರಜ್ಞಾವಂತಿಗೆ ಹೆಚ್ಚಾಗುತ್ತದೆ. ಸಾಹಿತ್ಯ ವಲಯದಲ್ಲಿ ಕೊರತೆಯಾಗಿರುವ ವೈಚಾರಿಕ ಬರಹಗಳು ಯುವ ಬರಹಗಾರರಿಂದ ಹೊರಹೊಮ್ಮಬೇಕಾಗಿದೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಸುವಿಚಾರ ಪ್ರಕಾಶನ ಹೊರತಂದಿರುವ ‘ಜೇನುಗೂಡು’ ಪ್ರಥಮ ಪುಸ್ತಕವನ್ನು ಕವಿ ಅಬ್ದುಲ್ ಸಮದ್ ಬಾವಾ ಹಾಜಿ ಬಿಡುಗಡೆಗೊಳಿಸಿದರು. ಬಹುಭಾಷಾ ಸಾಹಿತಿ ಮಹಮ್ಮದ್ ಬಡ್ಡೂರು ಪುಸ್ತಕ ಪರಿಚಯ ಮಾಡಿದರು.
ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಶೀರ್ ಅಹ್ಮದ್ ಕಿನ್ಯ, ಪೀಸ್ ಆಂಡ್ ಅವಾರ್ನೆಸ್ ಟ್ರಸ್ಟ್‌ನ ಅಲ್ತಾಫ್ ಬಿಳಗುಳ, ಸವಣೂರು ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಹೈದರ್ ಆಲಿ ಐವತ್ತೊಕ್ಲು, ತುಳುನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಸನ್ ಮಾಡೂರು, ಜಯಕರ್ನಾಟಕ ತಾಲೂಕು ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಎಚ್. ಆರ್. ಅರ್ಕುಲ ಉಪಸ್ಥಿತರಿದ್ದರು. ಸುವಿಚಾರ ಪ್ರಕಾಶನದ ಸಂಚಾಲಕ ಹಕೀಂ ಪದಡ್ಕ ಸ್ವಾಗತಿಸಿದರು. ಹಸನ್ಮುಖಿ ಬಡಗನ್ನೂರು ವಂದಿಸಿದರು. ಕೆ.ಬಿ. ಮಹಮ್ಮದ್ ಗಝ್ಝಾಲಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.







