ಚೀನಾ: 2 ಕಲ್ಲಿದ್ದಲು ಗಣಿ ಸ್ಫೋಟ; 38 ಸಾವು

ಬೀಜಿಂಗ್, ಡಿ. 3: ಚೀನಾದಲ್ಲಿ ಈ ವಾರ ಎರಡು ಕಲ್ಲಿದ್ದಲು ಗಣಿಗಳಲ್ಲಿ ನಡೆದ ಸ್ಫೋಟಗಳಲ್ಲಿ ಕನಿಷ್ಠ 38 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಒಂದು ಸ್ಫೋಟವು ಹೈಲಾಂಗ್‌ಜಿಯಾಂಗ್ ಪ್ರಾಂತದ ಕಿಟಾಯಿಹೆ ನಗರದಲ್ಲಿರುವ ಖಾಸಗಿ ಗಣಿಯೊಂದರಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದೆ ಎಂದು ಕ್ಸಿನುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಆ ಘಟನೆಯಲ್ಲಿ 22 ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿದ್ದರು. ಅವರ ಪೈಕಿ ಶುಕ್ರವಾರದ ವೇಳೆಗೆ 21 ಮಂದಿ ಮೃತಪಟ್ಟಿರುವುದು ಖಾತರಿಯಾಗಿದೆ ಎಂದು ಕ್ಸಿನುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಕೆಲವು ಸುರಂಗಗಳಲ್ಲಿ ಸಿಲುಕಿರುವ ಅವಶೇಷಗಳ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ.
ಪ್ರತ್ಯೇಕ ಘಟನೆಯೊಂದರಲ್ಲಿ, ಒಳ ಮಂಗೋಲಿಯದಲ್ಲಿರುವ ಗಣಿಯೊಂದು ಸ್ಫೋಟಗೊಂಡು ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಅನಿರ್ದಿಷ್ಟ ಸಂಖ್ಯೆ ಕಾರ್ಮಿಕರು ಈಗಲೂ ಗಣಿಯೊಳಗೆ ಹೂತುಹೋಗಿದ್ದಾರೆ. ಅವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕ್ಸಿನುವಾ ತಿಳಿಸಿದೆ.
ಚೀನಾ ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ದೇಶವಾಗಿದೆ. ಅಲ್ಲಿ ಭೀಕರ ಕಲ್ಲಿದ್ದಲು ಗಣಿ ಅಪಘಾತಗಳು ಸಾಮಾನ್ಯವಾಗಿವೆ.
ಚಾಂಗ್‌ಕಿಂಗ್‌ನಲ್ಲಿ ಅಕ್ಟೋಬರ್ 31ರಂದು ನಡೆದ ಗಣಿ ಸ್ಫೋಟದಲ್ಲಿ 33 ಕಾರ್ಮಿಕರು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.







