ಬಂಧನಾವಧಿಯನ್ನು ಮ್ಯಾಜಿಸ್ಟ್ರೇಟ್ 180 ದಿನಗಳಿಗೆ ವಿಸ್ತರಿಸಬಹುದು: ಹೈಕೋರ್ಟ್

ಚೆನ್ನೈ, ಡಿ.3: ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆಯನ್ವಯ ಅಪರಾಧದ ಆರೋಪಿಯೊಬ್ಬನ ಬಂಧನಾವಧಿಯನ್ನು ನ್ಯಾಯಾಲಯವೊಂದು 180 ದಿನಗಳ ತನಕ ವಿಸ್ತರಿಸಬಹುದು. ಆದರೆ, ತನಿಖೆಯ ಪ್ರಗತಿಯ ಕುರಿತಾಗಿ ಪಬ್ಲಿಕ್ ಪ್ರಾಸಿಕ್ಯೂಟರ್‌ರ ವರದಿ ಅದಕ್ಕೆ ತೃಪ್ತಿಕರವೆನಿಸಬೇಕು ಹಾಗೂ ಇತರ ನಿರ್ದಿಷ್ಟ ಕಾರನಗಳನ್ನು ಗುರುತಿಸಿರಬೇಕೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
90 ದಿನಗಳ ರಿಮಾಂಡ್ ಅವಧಿ ಮುಗಿದ ಬಳಿಕ ಆ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ಗೆ ನ್ಯಾಯಾಂಗ ವ್ಯಾಪ್ತಿ ಇರುವುದಿಲ್ಲ. ಆದುದರಿಂದ ನ್ಯಾಯಾಂಗ ಬಂಧನದಲ್ಲಿರುವ ರಿಶ್ವಾನ್ ಶರೀಫ್ ಎಂಬಾತನನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಂ.ಜೈಚಂದ್ರನ್ ಹಾಗೂ ಎನ್.ಭಾಸ್ಕರನ್‌ರನ್ನೊಳಗೊಂಡ ವಿಭಾಗೀಯ ಪೀಠವೊಂದು ಗುರುವಾರ ಈ ಆದೇಶ ನೀಡಿದೆ.
ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ-1976ರ ಸೆ.43-ಡಿ, 90 ದಿನಗಳಿಗಿಂತ ಹೆಚ್ಚು ಕಾಲ ರಿಮಾಂಡ್ ವಿಸ್ತರಣೆಯ ಅಧಿಕಾರ ಚಲಾಯಿಸುವುದರಿಂದ ಮ್ಯಾಜಿಸ್ಟ್ರೇಟರನ್ನು ಹೊರಗೆ ಇಡುವುದಿಲ್ಲ. ಆದಾಗ್ಯೂ, ಈ ಅಧಿಕಾರವನ್ನು 180 ದಿನಗಳಿಗಷ್ಟೇ ಚಲಾಯಿಸಲು ಸಾಧ್ಯವೆಂದು ಅದು ತಿಳಿಸಿದೆ.





