218 ಕೋ.ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿ: ಶಾಸಕ ಮೊದಿನ್ ಬಾವ
.jpg)
ಮಂಗಳೂರು, ಡಿ.3: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 218 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಮೊದಿನ್ ಬಾವ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ವ್ಯವಸ್ಥೆಗೆ ಎಡಿಬಿಯಿಂದ ನೀಡಲಾಗುತ್ತಿದ್ದ 160 ಕೋಟಿ ರೂ.ಅನುದಾನವನ್ನು ಪರಿಷ್ಕರಿಸಿ 218 ಕೋ. ರೂ. ನೀಡಲು ಆದೇಶವಾಗಿದೆ. ಹಾಗೆಯೇ ಒಳಚರಂಡಿ ವ್ಯವಸ್ಥೆಗೆ ನೀಡಲಾಗುತ್ತಿದ್ದ 120 ಕೋಟಿ ರೂ.ಅನುದಾನವನ್ನು 195 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ ಎಂದರು.
ಡ್ರೈನೇಜ್ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಹಾಗೂ ಡ್ರೈನೇಜ್ ಇನ್ನೂ ಜಾರಿಯಾಗದ ಪ್ರದೇಶಗಳಲ್ಲಿ ಸರ್ವೆ ಕಾರ್ಯ ನಡೆಸಿ ಮಂಜೂರಾಗಿರುವ 195 ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗುವುದು. ಸುರತ್ಕಲ್ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಅಲ್ಲಿನ ಪ್ರದೇಶಗಳ ಬಾವಿಗಳಲ್ಲಿ ಕೊಳಚೆ ನೀರು ಸೇರುತ್ತಿರುವ ಬಗ್ಗೆ ದೂರುಗಳಿವೆ. ಇದನ್ನು ಸರಿಪಡಿಸಲು ಶಾಸಕನ ನೆಲೆಯಲ್ಲಿ ಮನಪಾ, ಕುಡ್ಸೆಂಪ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಹಿಂದೆ ಅಮೃತ್ ಯೋಜನೆಯಡಿಯಲ್ಲಿ ಪಾಲಿಕೆಗೆ ಮಂಜೂರಾಗಿರುವ 160 ಕೋಟಿ ರೂ. ಅನುದಾನದಲ್ಲಿ 50 ಕೋಟಿ ರೂ. ಅನುದಾನವನ್ನು ಈ ಉದ್ದೇಶಕ್ಕೆ ಮೀಸಲಿರಿಸಿಕೂಡಲೇ ಎಸ್‌ಎಲ್‌ಪಿಸಿ(ರಾಜ್ಯ ಮಟ್ಟದ ತಾಂತ್ರಿಕ ಸಮಿತಿ) ಯಿಂದ ಮಂಜೂರುಗೊಳಿಸಿ ಜನವರಿ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ಸೂಚಿಸಿದ್ದೇನೆ. ಇದರಿಂದಾಗಿ ಡ್ರೈನೇಜ್ ಇಲ್ಲದ ಪ್ರದೇಶದ ಜನರ ಸಮಸ್ಯೆ ಪರಿಹರಿಸಿದಂತಾಗುತ್ತದೆ ಎಂದು ಮೊದಿನ್ ಬಾವ ವಿವರಿಸಿದರು.
218 ಕೋಟಿ ರೂ. ಮೊತ್ತದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಾಮಗಾರಿಗಳಲ್ಲಿ ಮೀಟರೀಕರಣ, ಪೈಪ್‌ಲೈನ್ ದುರಸ್ಥಿ ಹಾಗೂ ಇತರ ಅಭಿವೃದ್ದಿ ಕಾಮಗಾರಿಗಳು ನಡೆಯಲಿವೆ ಎಂದರು.
94 ಸಿಸಿ ಸಕ್ರಮೀಕರಣಕ್ಕೆ ಸಂಬಂಧಿಸಿ ಈ ಹಿಂದೆ ನೀಡಲಾಗಿರುವ ಒಂದೂವರೆ ಸೆಂಟ್ಸ್ ಜಾಗದ ಮಿತಿಯನ್ನು ಮೂರು ಸೆಂಟ್ಸ್ ಹೆಚ್ಚಿಸಲು ಮತ್ತು ಇದಕ್ಕಾಗಿ ಫಲಾನುಭವಿಗಳು ಸರಕಾರಕ್ಕೆ ಪಾವತಿಸಬೇಕಾದ 10 ಸಾವಿರ ರೂ. ಶುಲ್ಕವನ್ನು 5 ಸಾವಿರ ರೂ. ಕಡಿಮೆಗೊಳಿಸಲು ಇತ್ತೀಚೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರನ್ನು ಭೇಟಿ ಮಾಡಿ ಮಾಡಿರುವ ಮನವಿಗೆ ಸ್ಪಂದಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
ಅಲ್ಲದೆ, ಪುರಸಭೆ ಮತ್ತು ಮಹಾನಗರ ಪಾಲಿಕೆಯ ಗಡಿಭಾಗದ ಗ್ರಾಮೀಣ ಪ್ರದೇಶದ 94ಸಿಸಿ ಅರ್ಜಿದಾರರಿಗೂ ನಗರ ಪ್ರದೇಶದಂತೆ ಇದ್ದ ಒಂದೂವರೆ ಸೆಂಟ್ಸ್ ಜಾಗದ ಬದಲಿಗೆ ವಿಶೇಷ ವಲಯ ಎಂದು ಪರಿಗಣಿಸಿ 5 ಸೆಂಟ್ಸ್‌ಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಹರಿನಾಥ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಮುಹಮ್ಮದ್ ಕುಂಜತ್‌ಬೈಲ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್, ಮೂಡ ಸದಸ್ಯ ಕೇಶವ ಸನಿಲ್, ನಝೀರ್ ಬಜಾಲ್ ಉಪಸ್ಥಿತರಿದ್ದರು.







