ವಿಧಾನಸಭೆ ಆವರಣದಲ್ಲಿ ಮಹಾನ್ ಪುರುಷರ ಸಂದೇಶಗಳನ್ನು ಬರೆಯಿಸಿ ಎಂದ ಉಪ ಕುಲಪತಿ
ಸಂಸ್ಕೃತಿ ಮತ್ತು ರಾಜಕಾರಣ ಗೋಷ್ಠಿಯಲ್ಲಿ ಡಾ.ಮಲ್ಲಿಕಾ ಘಂಟಿ ಅಭಿಮತ
ರಾಯಚೂರು, ಡಿ.3: ಮಹಾನ್ ಪುರುಷರ ಸಂದೇಶಗಳು ಇಲ್ಲದೇ ವಿಧಾನಸೌಧ ಭಣಭಣವೆನ್ನುತ್ತಿದೆ ಎಂದು ತಮ್ಮದೇ ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಹೇಳಿದ ಕನ್ನಡ ವಿವಿ ಉಪ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರು, ವಿಧಾನಸೌಧದಲ್ಲಿ ಅದರ ಆವರಣದಲ್ಲಿ ಬಸವಶ್ವೇರರು ಸೇರಿದಂತೆ ಮಹಾನ್ ಪುರುಷರ, ಪರಂಪರೆ ಇತಿಹಾಸ ನೆನಪಿಸುವ ಸಂದೇಶಗಳನ್ನು ಬರೆಯಿಸಬೇಕು ಎಂದು ಹೇಳಿದರು.
ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ನಡೆದ ಸಂಸ್ಕೃತಿ ಮತ್ತು ರಾಜಕಾರಣ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಮೂಲಕವಾದರೂ ವಿಧಾನಸೌಧದ ಒಳಗೆ ಪ್ರವೇಶಿಸುವವರಿಗೆ ಪರಂಪರೆ ಇತಿಹಾಸ, ಮಹಾನ್ ಪುರುಷರ ಸಂದೇಶಗಳು ತಿಳಿಸಿದಂತಾಗುತ್ತದೆ ಮತ್ತು ಅವರಲ್ಲಿ ಅಡಗಿರುವ ದೌರ್ಜನ್ಯ ಮತ್ತು ಕ್ರೌರ್ಯದ ಮನಸ್ಸು ಬದಲಾಯಿಸಲು ಸಹಕಾರಿಯಾಗುತ್ತದೆ ಹಾಗೂ ಕೆಲಸ ಮಾಡಲು ಪ್ರೇರಪೆಣೆ ಒದಗಿಸಿದಂತಾಗುತ್ತದೆ ಎಂದರು.
ಸರಕಾರವು ಜನಪರ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ದಿಗ್ಗಜ ಸಾಹಿತಿಗಳನ್ನು ಕರೆದು ಚರ್ಚಿಸಿ ಅವರ ನೀಡುವ ಸಲಹೆಗಳನ್ನು ಸಕರಾತ್ಮಕವಾಗಿ ಸ್ವೀಕರಿಸಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು; ಇದ್ಯಾವುದು ಆಗದ ಪರಿಣಾಮ ಯೋಜನೆಗಳೆಲ್ಲವು ಪೇಪರ್‌ನಲ್ಲಿಯೇ ಉಳಿಯುವಂತಾಗಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತಿ ಮತ್ತು ರಾಜಕಾರಣದ ಮಧ್ಯೆ ಅಧಿಕಾರಷಾಹಿ ವರ್ಗ ತಡೆಗೋಡೆಯಾಗಿದೆ ಎಂದು ವ್ಯಾಖ್ಯಾನಿಸಿದ ಅವರು , ರಾಜಕಾರಣಿಗಳನ್ನು ತಿದ್ದಿತೀಡಬಹುದಾದ ಶಕ್ತಿ ಸಾಹಿತಿಗಳಲ್ಲಿದೆ. ಆದರೇ ಅಧಿಕಾರಿಗಳನ್ನು ತಿದ್ದುವವರಾರು ಎಂಬ ಪ್ರಶ್ನೆ ಎದುರಾಗಿದೆ ಎಂದರು.
ಸಾಹಿತಿಗಳಿಗೆ ರಾಜಕೀಯ ಪ್ರಜ್ಞೆ ಮತ್ತು ರಾಜಕಾರಣಿಗಳಿ ಸಾಹಿತ್ಯ ಪ್ರಜ್ಞೆ ಅವಶ್ಯಕವೆಂಬುದನ್ನು ಒತ್ತಿಹೇಳಿದ ಡಾ.ಮಲ್ಲಿಕಾ ಘಂಟಿ ಅವರು, ಆ ಪ್ರಜ್ಞೆ ಇರದ ಕಾರಣ ಅಪನಂಬಿಕೆ ಉಂಟಾಗುತ್ತಿದೆ ಮತ್ತು ವರ್ತಮಾನದ ಆಶಯಗಳನ್ನು ಈಡೇರಿಸಲು ಆಗುತ್ತಿಲ್ಲ ಎಂದು ವಿವರಿಸಿದರು.
ಖಾಕಿ,ಖಾವಿ ಮತ್ತು ಖಾದಿಗಳಿಗೆ ಅಂತಕರಣ ಮೂಡಿಸುವ ಕೆಲಸ ಮಾಡಬೇಕಿರುವುದು ಅವಶ್ಯವೆಂಬುದನ್ನು ವಿವಿಧ ಉದಾರಣೆಗಳ ಮೂಲಕ ವಿವರಿಸಿದ ಘಂಟಿ ಅವರು, ರಾಜಕಾರಣ,ಧರ್ಮ ಮತ್ತು ಸಂಸ್ಕೃತಿಗೆ ಬಹುದೊಡ್ಡ ಪರಂಪರೆ ಇದ್ದು,ಅದನ್ನು ನೋಡುವ ಕಣ್ಣುಗಳು ಸರಿಯಾಗಿರದ ಕಾರಣ ನಮ್ಮನ್ನು ನಾವು ಅರಿಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಸಾಹಿತ್ಯ ಮತ್ತು ತಾತ್ವಿಕ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ವ್ಯಕ್ತಪಡಿಸಿದರೇ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಆದ ಗತಿಯನ್ನು ನಾವು ನೆನಪಿಸಿಕೊಳ್ಳಬೇಕಿದೆ . ಈ ಕಾರಣದಿಂದಲೇ ಸಾಹಿತ್ಯ ಮತ್ತು ತಾತ್ವಿಕವಾಗಿ ಮಾತನಾಡಲಾರದ ಸ್ಥಿತಿ ಉಂಟಾಗಿದೆ ಎಂದರು.
ಸಾಹಿತ್ಯ ಮತ್ತು ರಾಜಕಾರಣದ ವಿಷಯದ ಕುರಿತು ಮಾತನಾಡಿದ ಡಾ.ಬಂಜಗೆರೆ ಜಯಪ್ರಕಾಶ ಅವರು, ಸಾಹಿತ್ಯವು ಸದಾ ಪ್ರಭುತ್ವದೊಂದಿಗೆ ಸಂಘರ್ಷ ಮಾಡುವಂತದ್ದು, ಇದರ ಗುಣ ಜನರ ಆಶಯಗಳನ್ನು ಅಭಿವ್ಯಕ್ತಪಡಿಸುವ ಮತ್ತು ನಾಳೆಗಾಗಿ ಜನರನ್ನು ಪ್ರೋತ್ಸಾಹಿಸುವ ಕೆಲಸ ಮಾಡುವಂತದ್ದಾಗಿದೆ ಎಂದರು.
ರಾಜಕೀಯ ಮತ್ತು ಸಾಮಾಜಿಕ ಚಲನೆ ಕುರಿತು ಮಾಜಿ ಸಚಿವ ಎಚ್.ವಿಶ್ವನಾಥ ಮತ್ತು ಧರ್ಮ ಮತ್ತು ರಾಜಕಾರಣದ ಕುರಿತು ಶಾಸಕ ವೈ.ಎಸ್.ವಿ.ದತ್ತಾ ಅವರು ವಿಷಯ ಮಂಡಿಸಿದರು.
ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ, ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಮತ್ತಿತರರು ಇದ್ದರು.
ಮಲ್ಲಿಕಾರ್ಜುನ ಯಂಡಿಗೇರಿ ಸ್ವಾಗತಿಸಿದರು. ಲಿಂಗಯ್ಯ ಹಿರೇಮಠ ನಿರೂಪಿಸಿದರು. ಶ್ರೀಶೈಲ ಕರಿಶಂಕರಿ ವಂದಿಸಿದರು.







