ನಿಷೇಧದ ಹೊರತಾಗಿಯೂ ತಂಬಾಕು ದಾಸ್ತಾನು: ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

ಶಿವಮೊಗ್ಗ, ಡಿ. 3: ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಜಗಿಯುವ ತಂಬಾಕು ಉತ್ಪನ್ನ ಮಾರಾಟದ ಮೇಲೆ ರಾಜ್ಯ ಸರಕಾರ ನಿರ್ಬಂಧ ವಿಧಿಸಿದೆ. ಅದರಂತೆ ಜಿಲ್ಲೆಯಾದ್ಯಂತ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿ ಈಗಾಗಲೇ ಜಿಲ್ಲಾಡಳಿತ ಅಧಿಕೃತ ಆದೇಶ ಕೂಡ ಹೊರಡಿಸಿದೆ.
ಇದರ ಹೊರತಾಗಿಯೂ ಹಲವೆಡೆ ತಂಬಾಕು ಉತ್ಪನ್ನಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಂಡ ಮುಂದಾಗಿದ್ದು, ನೇರ ಕಾರ್ಯಾಚರಣೆಗಿಳಿದಿದೆ. ಶನಿವಾರ ಕಾನೂನುಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ನಡೆಸುತ್ತಿದ್ದ ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯಲ್ಲಿರುವ ಅಂಗಡಿಯೊಂದರ ಮೇಲೆ ಇಲಾಖೆ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ದಿಢೀರ್ ದಾಳಿ ನಡೆಸಿದೆ.
ಈ ವೇಳೆ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿ ಆರ್.ಕೃಷ್ಣಪ್ಪ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇಲಾಖೆಯ ಸುರಕ್ಷತಾ ಅಧಿಕಾರಿಗಳಾದ ಟಿ.ಮಂಜುನಾಥ್, ಸೋಮಶೇಖರ್ ಓಲೇಕರ್, ವಿಶ್ವನಾಥ್, ನೀಲಕಂಠ ಮೊದಲಾದವರಿದ್ದರು. ನ್ಯಾಯಾಲಯದ ಆದೇಶದಂತೆ ಸರಕಾರವು ಈ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿತ್ತು.
ಆದರೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಕೆಲ ವ್ಯಾಪಾರಿಗಳು ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟ ನಡೆಸುತ್ತಿದ್ದ ಮಾಹಿತಿಯಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಇದೀಗ ನೇರ ಕಾರ್ಯಾಚರಣೆಗಿಳಿದಿದ್ದು, ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರಗಿಸಲು ಮುಂದಾಗಿದೆ.
ಇಲಾಖೆಯ ಅಧಿಕಾರಿ ಆರ್.ಕೃಷ್ಣಪ್ಪ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಜಗಿಯುವ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ. ಈಗಾಗಲೇ ಈ ಕುರಿತಂತೆ ವ್ಯಾಪಾರಿಗಳಿಗೆ ಹಾಗೂ ಸಂಬಂಧಿಸಿದವರಿಗೆ ಸೂಕ್ತ ತಿಳಿವಳಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಮಾರಾಟ ನಡೆಸುವುದು ಕಂಡುಬಂದರೆ, ಸಂಬಂಧಿಸಿದವರ ವಿರುದ್ಧ್ದ ಶಿಸ್ತುಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.







