ಪತ್ರಕರ್ತನ ಮೇಲೆ ಹಲ್ಲೆಗೆ ಖಂಡನೆ
ಶಿವಮೊಗ್ಗ,ಡಿ.3: ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಜಾಟಿವಿ ವರದಿಗಾರ ದಿನ್ನೂರು ಮಂಜುನಾಥ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಕ್ಯಾಮರಾವನ್ನು ಜಖಂಗೊಳಿಸಿರುವ ಕೃತ್ಯವನ್ನು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರವಾಗಿ ಖಂಡಿಸಿದೆ.
ಅತಿಕ್ರಮಣದ ಮೂಲಕ ಅದ್ದಿಗಾನ ಹಳ್ಳಿಯಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ನೈಜ ಸ್ಥಿತಿಯ ವರದಿಗಾರಿಕೆಗೆ ತೆರಳಿದ್ದ, ಪ್ರಜಾ ಟಿವಿ ವರದಿಗಾರ ದಿನ್ನೂರು ಮಂಜುನಾಥ್‌ರವರ ಮೇಲೆ ಹಲ್ಲೆ ನಡೆಸಿರುವ ಸ್ಥಳೀಯ ದುಷ್ಕರ್ಮಿಗಳು, ಅವರ ಕ್ಯಾಮರಾವನ್ನು ಕೂಡಾ ಜಖಂಗೊಳಿಸಿದ್ದಾರೆ.
ಈ ಕುರಿತಾಗಿ ತಮ್ಮ ವಿವರಣೆಯನ್ನು ಕೂಡಾ ದಾಖಲಿಸುವುದಾಗಿ ಹೇಳಿದರೂ ಕೇಳದೇ ಈ ರೀತಿಯ ಕೃತ್ಯ ಎಸಗಿರುವುದು ಅಭಿವ್ಯಕ್ತಿ ಸ್ವಾತಂತ್ಯದ ಮೇಲಿನ ಹಲ್ಲೆ ಎಂದಿರುವ ಸಂಘದ ಪದಾಧಿಕಾರಿಗಳು, ಈ ಕೃತ್ಯ ಎಸಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜನುಕುಂಟೆ ಗ್ರಾಪಂ ಅಧ್ಯಕ್ಷೆಯ ಪತಿ ವೀರಣ್ಣ ಮತ್ತವರ ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಹಾಗೂ ಪತ್ರಕರ್ತರು, ಮಾಧ್ಯಮ ವರದಿಗಾರರು, ಛಾಯಾಗ್ರಾಹಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಈ ರೀತಿಯ ಹಲ್ಲೆಯನ್ನು ತಡೆಗಟ್ಟಲು ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣ ಈಗಾಗಲೇ ರಾಜಾನುಕುಂಟೆ ಠಾಣೆಯಲ್ಲಿ ದಾಖಲಾಗಿದ್ದು, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ಖಜಾಂಚಿ ಎಸ್. ಕೆ. ಗಜೇಂದ್ರ ಸ್ವಾಮಿ, ನಗರ ಕಾರ್ಯದರ್ಶಿ ಎಂ. ನಿಂಗನಗೌಡ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.







