ಅಶೋಕ್ ಹೇಳಿಕೆಗೆ ಪಿಎಫ್‌ಐ ಖಂಡನೆ
ಬೆಂಗಳೂರು, ಡಿ.3: ಬಿಜೆಪಿ ನಾಯಕ ಆರ್.ಅಶೋಕ್ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್‌ಐ) ಬಗ್ಗೆ ನಿರಾಧಾರ ಆರೋಪ ಮಾಡಿ ಸದನವನ್ನು ತಪ್ಪುದಾರಿಗೆ ಎಳೆದಿದ್ದಾರೆ. ಇದನು ಖಂಡನೀಯ ಎಂದು ಪಿಎಫ್‌ಐ ಪ್ರಕಟನೆ ತಿಳಿಸಿದೆ.
ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸುತ್ತಿರುವ ಅಮೂಲ್ಯ ವೇಳೆಯಲ್ಲಿ ಯಾವುದೇ ಮಾಹಿತಿ ಇಲ್ಲದೆ ನಿರಾಧಾರ ಹೇಳಿಕೆ ನೀಡಿರುವುದು ಖಂಡನೀಯ. ಅವರು ಯಾವುದೇ ದಾಖಲೆಗಳನ್ನು ನೀಡದೆ, ಕೇವಲ ಪೂರ್ವಾಗ್ರಹಪೀಡಿತರಾಗಿ ಪಿಎಫ್‌ಐ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಹೇಳಿದ್ದಾರೆ. ಕಳೆದ 25 ವರ್ಷಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯೊಂದರಲ್ಲೇ ಸುಮಾರು 117 ರಾಜಕೀಯ ಕೊಲೆಗಳು ನಡೆದಿವೆ. ಇದರಲ್ಲಿ ಗರಿಷ್ಠ ಪ್ರಮಾಣದ ಕೊಲೆಗಳನ್ನು ನಡೆಸಿದ್ದು ಅಶೋಕ್ ಪ್ರತಿನಿಧಿಸುವ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ. ಮಡಿದವರಲ್ಲಿ ಶೇ.99 ಮಂದಿ ಹಿಂದುಳಿದ ವರ್ಗದವರು. ಈ ವಿಚಾರ ಅಶೋಕ್‌ರ ಗಮನಕ್ಕೆ ಏಕೆ ಬಂದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಅಶೋಕ್ ಹೇಳಿಕೆಯ ಹಿಂದೆ ಕೋಮುವಾದದ ವಿರುದ್ಧ ಧ್ವನಿ ಎತ್ತುವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಪಿಎಫ್‌ಐಯನ್ನು ಮಟ್ಟ ಹಾಕುವ ಷಡ್ಯಂತ್ರವಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ನ್ಯಾಯಾಂಗ ಹೋರಾಟವನ್ನು ಮಾಡಲು ಸಂಘಟನೆ ತೀರ್ಮಾನಿಸಿದೆ ಎಂದು ಯಾಸಿರ್ ಹಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.





