ಹಳೆ ನೋಟುಗಳ ಮೂಲಕವೂ ಭರ್ಜರಿ ಪುಸ್ತಕ ಮಾರಾಟ...!

►ಹೊಸನೋಟುಗಳ ಕೊರತೆ
►ಚಿಲ್ಲರೆ ಸಮಸ್ಯೆ
ನೋಟು ನಿಷೇಧ ಸಾಹಿತ್ಯ ಸಮ್ಮೇಳನದ ಮೇಲೆ ತನ್ನ ತೀವ್ರ ಪರಿಣಾ ಮವನ್ನು ಬೀರಿದ್ದು, ಪುಸ್ತಕ ವ್ಯಾಪಾರಿಗಳು ಬಾಡಿದ ಮುಖದೊಂದಿಗೆ ಪುಸ್ತಕ ಪ್ರಿಯರನ್ನು ಎದುರಿಸಬೇಕಾಗಿದೆ. ಇರುವ ನೂರರ ನೋಟು ಗಳನ್ನು ತೆತ್ತು ಪುಸ್ತಕ ಕೊಳ್ಳಲು ಸಾಹಿತ್ಯಾಭಿ ಮಾನಿಗಳು ಹಿಂಜರಿಕೆ ತೋರುತ್ತಿರುವುದು, ಪುಸ್ತಕ ಮಾರಾಟಕ್ಕೆ ತೊಡಕಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲೂ ಸಾಹಿತ್ಯಾಸಕ್ತರು ಪುಸ್ತಕ ಗಳ ಮೇಲೆ ತೋರುತ್ತಿರುವ ಅಭಿಮಾನವನ್ನು ತಿರಸ್ಕರಿಸುವಂತಿಲ್ಲ. ಆದರೆ ಎಂದಿನ ವ್ಯಾಪಾರ ಗಳು ನಮಗೆ ಸಿಗುತ್ತಿಲ್ಲ ಎಂದು ಓರ್ವ ಪುಸ್ತಕ ಮಳಿಗೆಯ ಮುಖ್ಯಸ್ಥರು ಹೇಳುತ್ತಾರೆ. ದಿನಕ್ಕೆ ಎರಡು ಸಾವಿರ ರೂ.ನಷ್ಟು ಮಾರಾಟವಾದರೆ ಅದೇ ಹೆಚ್ಚು ಎನ್ನುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೆಲವರು ಪ್ಲಾಸ್ಟಿಕ್ ಕಾರ್ಡ್‌ಗಳ ಮೂಲಕ ಹಣ ಪಾವತಿಸಲು ಇಚ್ಛಿಸುತ್ತಿದ್ದಾರೆ. ಆದರೆ ಅದಕ್ಕೆ ಬೇಕಾಗಿರುವ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಕೆಲವು ಪ್ರತಿಷ್ಠಿತ ಪ್ರಕಾಶಕರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕವೂ ಪುಸ್ತಕಗಳ ವ್ಯಾಪಾರವನ್ನು ನಡೆಸುತ್ತಿದ್ದಾರೆ. ನವಕರ್ನಾಟಕ, ಸಪ್ನಾದಂತಹ ಸಂಸ್ಥೆಗಳು ಇಲ್ಲಿ ಸೈಫ್ ಮೂಲಕ ಪುಸ್ತಕ ವ್ಯಾಪಾ ರವನ್ನು ಮಾಡುತ್ತಿವೆ. ಆದರೆ ರಾಯಚೂರಿ ನಂತಹ ಪ್ರದೇಶಗಳಲ್ಲಿ ಇಂಟರ್ನೆಟ್ ಕೈಕೊಡು ತ್ತಿರುವುದರಿಂದ ಯಶಸ್ವಿಯಾಗಿ ಕಾರ್ಡ್‌ಗಳ ಮೂಲಕ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹಳೆ ನೋಟು ಚಲಾವಣೆ!
ಇದೇ ಸಂದರ್ಭದಲ್ಲಿ ಕೆಲವರು 500 ಮತ್ತು 1000ರೂ. ಹಳೆ ನೋಟುಗಳ ಜೊತೆಗೆ ಬಂದು ಪುಸ್ತಕ ವ್ಯಾಪಾರಕ್ಕಿಳಿಯುವುದೂ ಇದೆ ಎಂದು ಪ್ರಕಾಶಕರೊಬ್ಬರು ಹೇಳುತ್ತಾರೆ.
ನೂರರ ನಗದು ಗ್ರಾಹಕರಲ್ಲಿ ತೀರಾ ಕಡಿಮೆ ಇರುವುದರಿಂದ ಅವರು ಅದನ್ನು ನೀಡಲು ಹಿಂಜರಿಯುತ್ತಾರೆ. ಕೆಲವರು 2,000 ರೂ.ಚಿಲ್ಲರೆ ಗಾಗಿಯೇ ಪುಸ್ತಕಕೊಳ್ಳಲು ಬರುತ್ತಾರೆ. 200 ಅಥವಾ 300 ರೂ.ನ ಪುಸ್ತಕಗಳಿಗೆ 2,000 ರೂ. ಚಿಲ್ಲರೆ ನೀಡುವುದು ತುಂಬಾ ಕಷ್ಟವಾಗುತ್ತದೆ ಎಂದು ಅವರು ಗೋಳು ತೋಡಿಕೊಂಡಿದ್ದಾರೆ.
ಕೆಲವು ಸಣ್ಣ ಪುಟ್ಟ ಪ್ರಕಾಶಕರು ಹಳೆಯ ನೋಟುಗಳನ್ನು ತೆಗೆದುಕೊಂಡು ತಮ್ಮ ಪುಸ್ತಕ ಗಳನ್ನು ಮಾರುತ್ತಿರುವುದು ಕಂಡು ಬಂತು. 500 ರೂ. ಬೆಲೆಯ ಪುಸ್ತಕಗಳನ್ನು ಕೊಂಡರೆ ಹಳೆಯ ನೋಟುಗಳನ್ನು ತೆಗೆದುಕೊಳ್ಳುತ್ತೇವೆ ಎಂಬ ಆಫರ್‌ಗಳನ್ನು ಸಣ್ಣ ಪುಟ್ಟ ಪ್ರಕಾಶಕರು ನೀಡುತ್ತಿದ್ದಾರೆ. ಈ ಮೂಲಕ ತಮ್ಮ ಪುಸ್ತಕಗಳನ್ನು ಮಾರಾಟ ಮಾಡಲು ಅವರು ದಾರಿಯೊಂದನ್ನು ಕಂಡುಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿರುವ ಗ್ರಾಮೀಣ ಪ್ರದೇಶದ ಸಾಹಿತ್ಯಾಸಕ್ತರಲ್ಲಿ ನಾವು ಕಾರ್ಡ್‌ಗಳ ಮೂಲಕ ಪುಸ್ತಕಗಳನ್ನು ಮಾರು ವುದು ಅಷ್ಟು ಸುಲಭವಿಲ್ಲ. ಇದೇ ಸಂದರ್ಭ ದಲ್ಲಿ ಹಳೆ ನೋಟುಗಳ ಚಲಾವಣೆಗೆ ಅನುಕೂಲ ವಾಗುತ್ತದೆಯೆಂಬ ಕಾರಣಕ್ಕಾಗಿಯಾದರೂ ಕೆಲವರು ಪುಸ್ತಕ ಕೊಳ್ಳುತ್ತಿದ್ದಾರೆ ಎನ್ನುವುದು ಓರ್ವ ಪ್ರಕಾಶಕರ ಸಂತಸದ ಮಾತು.
ಹಳೆ ನೋಟುಗಳನ್ನು ಪಡೆದುಕೊಳ್ಳದೇ ಇದ್ದರೆ ಅಷ್ಟರಮಟ್ಟಿಗೂ ಪುಸ್ತಕಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಿಂತ, ಹಳೆ ನೋಟುಗಳ ಮೂಲಕ ಒಂದಿಷ್ಟಾದರೂ ವ್ಯಾಪಾರ ಮಾಡುವುದು ವ್ಯಾವಹಾರಿಕ ದೃಷ್ಟಿ ಯಿಂದ ಲಾಭದಾಯಕ ಎಂದು ಅವರು ಹೇಳುತ್ತಾರೆ.







