ದೃಶ್ಯ ಮಾಧ್ಯಮಗಳು ಟಿಆರ್‌ಪಿ ವಿಷವರ್ತುಲದಿಂದ ಹೊರಬರಲಿ: ಹಿರಿಯ ಪತ್ರಕರ್ತ ರವಿ ಹೆಗಡೆ

ರಾಯಚೂರು,ಡಿ.3: ಮುದ್ರಣ ಮಾಧ್ಯಮಗಳಿಗೆ 150ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ದೇಶದ ಪ್ರಮುಖ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅನೇಕ ಪ್ರಮುಖ ಸ್ಥಿತ್ಯಂತ್ರಗಳನ್ನು ಒಡಲಲ್ಲಿಟ್ಟುಕೊಂಡಿದೆ. ಪ್ರಬುದ್ಧತೆ ಬಂದಿದ್ದು, ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ. 10ರಿಂದ 15ವರ್ಷಗಳ ಇತಿಹಾಸ ವಿರುವ ದೃಶ್ಯ ಮಾಧ್ಯಮಗಳು ಟಿಆರ್‌ಪಿ ವಿಷವರ್ತುಲದ ಹಿಂದೆ ಬೀಳದೆ ಪ್ರಬುದ್ಧತೆ ಮೈಗೂಡಿಸಿಕೊಳ್ಳಬೇಕಿದೆ. ಈ ಸಮಯ ಅವುಗಳಿಗೆ ಸಕಾಲ ಎಂದು ಉದಯವಾಣಿ ಪತ್ರಿಕೆಯ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.
ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ನಡೆದ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ ಗೋಷ್ಠಿಯಲ್ಲಿ ಅವರು ಮುದ್ರಣ ಮಾಧ್ಯಮದ ವಿಷಯ ಮಂಡಿಸಿ ಮಾತನಾಡಿದರು. ಟಿಆರ್‌ಪಿಉಳಿಸಿಕೊಂಡು ಸಾಮಾಜಿಕವಾಗಿ ಒಳಿತಾಗುವ ಕಾರ್ಯಕ್ರಮಗಳನ್ನು ಭಿತ್ತರಿ ಸುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದೃಶ್ಯಮಾಧ್ಯಮಗಳ ಸುದ್ದಿಮನೆಯಲ್ಲಿ ಚರ್ಚೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಮುದ್ರಣ ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆ ತೋರುವಲ್ಲಿ ಎಲ್ಲ ಮಾಧ್ಯಮಗಳಿಗಿಂತ ಮುಂದಿದೆ ಎಂಬ ಅಭಿಪ್ರಾಯವನ್ನು ವಿವಿಧ ಉದಾರಣೆಗಳ ಮೂಲಕ ವಿವರಿಸಿದ ಹಿರಿಯ ಪತ್ರಕರ್ತರು ಆಗಿರುವ ಉದಯವಾಣಿ ಸಂಪಾದಕ ರವಿ ಹೆಗಡೆ ಅವರು ಇತ್ತೀಚಿನ ದಿನಗಳಲ್ಲಿ ಪೀತಪತ್ರಿಕೆಗಳು ಜಾಸ್ತಿಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಪೀತಪತ್ರಿಕೋದ್ಯಮದ ಗುಣಗಳು ಮುಖ್ಯಪತ್ರಿಕೆಗಳ ಅಂಗಳದಲ್ಲಿ ಕಾಲಿಡದಂತೆ ನೋಡಿಕೊಳ್ಳಬೇಕಿದೆ ಎಂದರು. ಪಾಸಿಟಿವ್ ಅಜೆಂಡಾ ರೂಪದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮುದ್ರಣ ಮಾಧ್ಯಮಗಳು ನಿಭಾಯಿಸಬೇಕು, ಯಾವುದೇ ಪಂಥಗಳಿಗೆ ಸಿಮೀತರಾಗದೆ ಎಲ್ಲ ಮಗ್ಗಲುಗಳನ್ನು ತಿಳಿಸಿಕೊಡುವ ಕೆಲಸವನ್ನು ಮುದ್ರಣ ಮಾಧ್ಯಮಗಳು ಮಾಡಬೇಕು ಎಂದರು.
ಉದಯ ಟಿವಿಯ ಸುದ್ದಿ ವಿಭಾಗದ ಸಂಪಾದಕ ಸಮೀರ್‌ವುಲ್ಲಾ ಮಾತನಾಡಿ, ಚಾರಿತ್ರಿಕ ಹಿನ್ನೆಲೆ ದೃಶ್ಯಮಾಧ್ಯಮಗಳಿಗೆ ಇಲ್ಲ. ಅವುಗಳ ಟಿಆರ್‌ಪಿ ಎಂಬ ವಿಷವರ್ತುಲದಲ್ಲಿ ಸಿಕ್ಕು ಜನರ ಆಶಯಗಳನ್ನು ಮತ್ತು ಬೇಕು-ಬೇಡಗಳನ್ನು ನಿರ್ಲಕ್ಷಿಸುತ್ತಿವೆ ಮತ್ತು ಸಾಮಾಜಿಕ ಹೊಣೆಗಾರಿಕೆಗಳ ವಿಷಯದಲ್ಲಿ ಉದಾಸೀನತೆ ತೋರುತ್ತಿವೆ ಎಂಬ ಪ್ರಶ್ನೆ ಎದುರಾಗಿದೆ ಎಂದರು.
ವಸುದೇಂದ್ರ ಅವರು ಸಾಮಾಜಿಕ ಜಾಲತಾಣಗಳ ಕುರಿತು ಮಾತನಾ ಡಿದರು. ವಿಜಯವಾಣಿ ಸಂಪಾದಕ ಹರಿಪ್ರಕಾಶ ಕೋಣೆಮನೆ ಅವರು ಆಶಯನುಡಿಗಳನ್ನಾಡಿದರು. ಪ್ರಜಾವಾಣಿ ಸಂಪಾದಕ ಪದ್ಮಾರಾಜ್ ದಂಡಾವತಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ, ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಮತ್ತಿತರರು ಇದ್ದರು. ಸಾವಿತ್ರಿ ಮುಜುಂದಾರ್ ಸ್ವಾಗತಿಸಿದರು. ಶರಣಬಸವ ಬೆಟ್ಟದೂರು ನಿರೂಪಿಸಿದರು. ಸುರೇಶ ಜೀವನ್ಮುಖಿ ವಂದಿಸಿದರು.







