ಚುನಾವಣಾ ಕಾನೂನುಗಳ ಸಮಗ್ರ ಪರಿಶೀಲನೆಗೆ ಆಯೋಗದಿಂದ ಕೆಲಸ
ಹೊಸದಿಲ್ಲಿ, ಡಿ.3: ಚುನಾವಣಾ ಆಯೋಗವು ಚುನಾವಣಾ ಕಾನೂನುಗಳ ‘ವ್ಯಾಪಕ ಪರಿಶೀಲನೆಯ’ ಬಗ್ಗೆ ಕೆಲಸ ಮಾಡುತ್ತಿದೆ. ರಾಜಕೀಯವನ್ನು ಅಪರಾಧ ಮುಕ್ತಗೊಳಿಸಲು ಹಾಗೂ ರಾಜಕೀಯ ದೇಣಿಗೆಗಳನ್ನು ಸ್ವಚ್ಛಗೊಳಿಸಲು ಆಯೋಗ ಮಾಡಿರುವ ಹಲವು ಪ್ರಸ್ತಾವಗಳ ಕುರಿತು ಅದು ಸರಕಾರದ ಪ್ರತಿಕ್ರಿಯೆಯನ್ನು ‘ಕುತೂಹಲದಿಂದ ಕಾಯುತ್ತಿದೆ’ ಎಂದು ಮುಖ್ಯ ಚುನಾವಣಾಯುಕ್ತ ನಸೀಂ ಝೈದಿ ಇಂದಿಲ್ಲಿ ಹೇಳಿದ್ದಾರೆ.
ಹಣದ ಬಲ ಉಪಯೋಗಿಸಿದ ಪ್ರಕರಣಗಳಲ್ಲಿ ಚುನಾವಣೆ ರದ್ದುಗೊಳಿಸುವ ಅಧಿಕಾರವನ್ನು ಆಯೋಗ ಬಯಸುತ್ತಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ರದ್ದುಗೊಳಿಸಿದ ಚುನಾವಣೆಯ ಅಭ್ಯರ್ಥಿಗಳು ಪುನಃ ನಿರ್ಭಯದಿಂದ ಸ್ಪರ್ಧಿಸಿದ ಅನುಭವ ತಮ್ಮ ಬಳಿಯಿದೆಯೆಂದು ಅವರು ತಿಳಿಸಿದ್ದಾರೆ.
‘ಚುನಾವಣಾ ಕಾನೂನುಗಳ ಬಗ್ಗೆ ರಾಷ್ಟ್ರೀಯ ಕೊಡು-ಕೊಳ್ಳುವಿಕೆ ಸಮ್ಮೇಳನ’ದ ಉದ್ಘಾಟನಾ ಭಾಷಣ ಮಾಡಿದ ಝೈದಿ, ಚುನಾವಣಾ ಆಯೋಗದ ಕಾನೂನು ಸಂಶೋಧಕರು, ಕಾನೂನು ಪಂಡಿತರು ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಜನ ಪ್ರಾತಿನಿಧ್ಯ ಕಾಯ್ದೆಯ ಸಮಗ್ರ ಪರಿಶೀಲನೆಯ ಅಗತ್ಯವನ್ನು ಪೂರೈಸಲು ಕೆಲಸ ಮಾಡುತ್ತಿದ್ದಾರೆ ಎಂದರು.
ಚುನಾವಣಾ ಸುಧಾರಣೆ ಇನ್ನೊಂದು ಪ್ರಮುಖ ಕ್ಷೇತ್ರವಾಗಿದೆ. ಅದನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಸಬೇಕು. ಚುನಾವಣಾ ಆಯೋಗವು ಕಾನೂನು ರಚನೆಗಾಗಿ ಕಾಲ ಕಾಲಕ್ಕೆ ಕಳುಹಿಸಿದ್ದ ಚುನಾವಣಾ ಸುಧಾರಣೆಯ 47 ಪ್ರಸ್ತಾವಗಳ ಸಂಕಲನವೊಂದನ್ನು ಬಿಡುಗಡೆಗೊಳಿಸಲು ತಾವು ಸಂತೋಷ ಪಡುತ್ತಿದ್ದೇವೆಂದು ಅವರು ಹೇಳಿದರು.
ಈ ಪ್ರಸ್ತಾವಗಳನ್ನು ಕಾನೂನು ಆಯೋಗ ಪರಿಶೀಲಿಸಿದ್ದು. ಹಲವನ್ನು ಕಾನೂನುಗಳಾಗಿ ಮಾಡಲು ಅಂಗೀಕರಿಸಿದೆಯೆಂದು ಝೈದಿ ತಿಳಿಸಿದರು.





