ನೋಟಿನ ಸಮಸ್ಯೆ: ನೂರಾರು ಮದುವೆಗಳು ರದ್ದು, ಮುಂದೂಡಿಕೆ

ಹೈದರಾಬಾದ್, ಡಿ4: ಪ್ರಸಕ್ತ ಮದುವೆ ಸೀಸನ್‌ನ ಅತ್ಯಂತ ಪವಿತ್ರ ದಿನ ಎನ್ನಲಾದ ರವಿವಾರಕ್ಕೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ನಿಗದಿಯಾಗಿದ್ದ ಸುಮಾರು 50 ಸಾವಿರಕ್ಕೂ ಹೆಚ್ಚು ಮದುವೆಗಳು ನಗದು ಕೊರತೆಯಿಂದಾಗಿ ದಿಢೀರನೇ ಮುಂದೂಡಲ್ಪಟ್ಟಿವೆ. ಹಲವು ಮದುವೆಗಳು ರದ್ದಾಗಿವೆ.
ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರದ ಹಿನ್ನೆಲೆಯಲ್ಲಿ, ಮದುವೆಗಳಿಗೆ ಬ್ಯಾಂಕುಗಳು ಹಣ ನೀಡಲು ಅಗತ್ಯವಾದ ದಾಖಲೆಗಳನ್ನು ಹೊಂದಿಸಲಾಗದೇ ಮದುವೆ ಮುಂದೂಡುವುದು ಅನಿವಾರ್ಯವಾಗಿದೆ. ಮದುವೆಗಳಿಗೆ ಈ ದಾಖಲೆಗಳನ್ನು ನೀಡಿದರೆ 2.5 ಲಕ್ಷ ರೂಪಾಯಿವರೆಗೂ ಖಾತೆಯಿಂದ ಹಣ ಪಡೆಯಲು ಅವಕಾಶ ನೀಡಲಾಗಿತ್ತು.
ನಗದು ಕೊರತೆ ಇರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ನಿಗದಿತ ದಾಖಲೆಗೆ ಪಟ್ಟುಹಿಡಿದಿದ್ದು, ಆಧಾರ್ ಕಾರ್ಡ್, ಪಾನ್‌ಕಾರ್ಡ್‌ಗಳನ್ನು ಕಡ್ಡಾಯಗೊಳಿಸಿವೆ. ಇದರ ಜತೆಗೆ ಯಾರಿಗೆ ನಗದು ರೂಪದಲ್ಲಿ ಎಷ್ಟು ಹಣ ನೀಡಲಾಗಿದೆ ಎಂಬ ವಿವರಗಳನ್ನು ಅಫಿಡವಿಟ್ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿವೆ. ಜತೆಗೆ ಆನ್‌ಲೈನ್ ವರ್ಗಾವಣೆ ಮತ್ತು ಸ್ವೈಪ್ ಮೆಷಿನ್ ಮೂಲಕ ನೀಡುವ ಪಾವತಿಗಳ ವಿವರಗಳನ್ನೂ ಕಡ್ಡಾಯವಾಗಿ ನೀಡುವಂತೆ ಸೂಚಿಸಿವೆ.
ಮದುವೆಗಳಿಗೆ ಹಣ ಮಂಜೂರು ಮಾಡಲು ಹಲವು ಷರತ್ತುಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಈ ಕ್ರಮ ಕೇವಲ ಕಣ್ಣೀರು ಒರೆಸುವಂಥದ್ದಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆವೈಸಿಯಡಿ ದಾಖಲೆಗಳನ್ನು ರೂಢಿ ಮಾಡಬೇಕೇ ಅಥವಾ ಮದುವೆ ಸಿದ್ಧತೆ ಮಾಡಬೇಕೇ ಎಂಬ ಪ್ರಶ್ನೆ ಮುಂದಿಡುತ್ತಾರೆ.
ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಒಂದರಿಂದ ಎರಡು ಲಕ್ಷ ರೂಪಾಯಿಗಿಂತ ಅಧಿಕ ಹಣ ನೀಡಲು ಬ್ಯಾಂಕುಗಳು ನಿರಾಕರಿಸುತ್ತಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ನಗದು ಕೊರತೆಯ ನೆಪ ಒಡ್ಡಿ ಹೀಗೆ ಸತಾಯಿಸಲಾಗುತ್ತಿದೆ ಎನ್ನುವುದು ಮಾಧಾಪುರದ ವಿ.ಚಂದ್ರಿಕಾ ಅವರ ದೂರು. ಇವರು ಹಣದ ಕೊರತೆಯಿಂದಾಗಿ ಮಗಳ ಮದುವೆಯನ್ನು ಮುಂದೂಡಿದ್ದಾರೆ.
"ಮನೆ ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೆ. ನನ್ನ ಹಣ ಖಾತೆಯಲ್ಲಿದ್ದರೂ ಅದನ್ನು ನನ್ನ ಏಕೈಕ ಮಗಳ ಮದುವೆಗೆ ಖರ್ಚು ಮಾಡುವಂತಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಆದರೆ ಆರ್‌ಬಿಐ ಮಾರ್ಗಸೂಚಿಗೆ ಅನುಗುಣವಾಗಿ ಹಣ ನೀಡಲಾಗುತ್ತಿದೆ ಎಂದು ಆಂಧ್ರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಂ.ಎನ್.ಸುಧಾಕರ್ ಹೇಳುತ್ತಾರೆ.





