ಭಾರತದಲ್ಲಿ ನಗದು ರಹಿತ ವ್ಯವಹಾರ ಅಸಾಧ್ಯ: ದೇವೇಗೌಡ

ಕಾಪು, ಡಿ.4: ದೇಶದ ಪ್ರಧಾನಿ ನರೇಂದ್ರ ಮೋದಿ ನಗದು ರಹಿತ ವ್ಯವ ಹಾರಕ್ಕಾಗಿ ದೇಶದ ಜನರ ಮೇಲೆ ಒತ್ತಡ ಹಾಕುವ ಪ್ರಯತ್ನದಲ್ಲಿದ್ದಾರೆ. ಆದರೆ ಭಾರತದಂತಹ ದೇಶದಲ್ಲಿ ನಗದು ರಹಿತ ವ್ಯವಹಾರ ನಡೆಸುವುದು ತೀರಾ ಕಷ್ಟದ ಕೆಲಸ ಎಂದು ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡ ಅಭಿ ಪ್ರಾಯ ಪಟ್ಟಿದ್ದಾರೆ.
ಕಾಪು ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ 20ನೆ ವಾರ್ಷಿಕ ಮಹಾಸಮ್ಮೇಳನದಲ್ಲಿ ಭಾಗವಹಿಸಲು ರವಿವಾರ ಆಗಮಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ನೋಟು ರದ್ಧತಿಯಿಂದ ದೇಶದ ಜನರಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಸಣ್ಣ ಕೈಗಾರಿಕೆ ಮತ್ತು ಗ್ರಾಮೀಣ ವ್ಯವಹಾರಗಳಿಗೆ ಬಹಳಷ್ಟು ಪೆಟ್ಟು ಬಿದ್ದಿದೆ. ಯೋಜನೆ ಜಾರಿಗೆ ತರುವ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸುವುದು ಅಗತ್ಯ. ಅದು ಬಿಟ್ಟು ಏಕಾಏಕಿ ಜಾರಿಗೆ ತಂದು ಜನರ ಮೇಲೆ ಹೇರುವುದು ಸರಿಯಲ್ಲ. ಎಲ್ಲದಕ್ಕೂ ಒಂದು ಮಿತಿ ಎಂಬು ದಿದೆ. ಅದು ಮಿತಿಮೀರಬಾರದು ಎಂದರು.
ನಾನು ಪಕೀರ ಎಂಬ ಮೋದಿ ಹೇಳಿಕೆ ದೇಶದ ಪ್ರಧಾನಿಗೆ ತಕ್ಕುದಾದಲ್ಲ. ದೇಶದ ಪ್ರಧಾನಿ ಈ ರೀತಿ ಮಾತನಾಡುವುದು ಸರಿಯಲ್ಲ. ಕರ್ನಾಟಕದಲ್ಲಿ 4-5 ಕೋಟಿ ರೂ. ನಗದು ಸಿಕ್ಕಿರುವ ಬಗ್ಗೆ ಮಾತನಾಡುವ ಆರ್‌ಬಿಐ ಗವ ರ್ನರ್ ಗುಜರಾತಿನವರು ನೋಟು ರದ್ಧತಿಗೆ ಮೊದಲೇ 13 ಸಾವಿರ ಕೋಟಿ ರೂ. ಗುಜರಾತಿನಲ್ಲಿ ಠೇವಣಿ ಮಾಡಿರುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ದೇಶದಲ್ಲಿ ಕಪ್ಪು ಹಣ ಕ್ರೋಡೀಕರಣಕ್ಕೆ ಈ ಹಿಂದಿನ ಪ್ರಧಾನಿಗಳು ಕಾರಣ ಎನ್ನುದಾದರೆ ನೆಹರೂ, ಇಂದಿರಾ, ವಾಜಪೇಯಿಯವರನ್ನು ಇದರಲ್ಲಿ ಶಾಮೀಲು ಎನ್ನಬಹುದೇ? ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಅಹಿಂದ ವರ್ಗಕ್ಕೆ ಶೇ.70ರಷ್ಟು ಮೀಸಲಾತಿ ನೀಡುವ ಕುರಿತು ಮಾಡಿರುವ ಪ್ರಾಸ್ತಾಪದ ಬಗ್ಗೆ ಪ್ರತಿಕ್ರಿಯುಸುವುದಿಲ್ಲ. ಮೀಸಲಾತಿ ಯಿಂದ ಸಾಮಾಜಿಕ ಸಮಾನತೆ ಸಾಧ್ಯ. ಇದರಿಂದಾಗಿಯೇ ಇಂದು ಹಿಂದು ಳಿದ ವರ್ಗದ ಜನರು ಅಧಿಕಾರ, ಉನ್ನತ ಹುದ್ದೆಗಳನ್ನು ಅಲಂಕರಿಸು ವಂತಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಎಂ.ಫಾರೂಖ್, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಉಡುಪಿ ಜಿಲ್ಲಾಧ್ಯಕ್ಷ ದಕ್ಷತ್ ಶೆಟ್ಟಿ, ಕಾಪು ಕ್ಷೇತ್ರ ಅಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ, ಅಲ್ಪಸಂಖ್ಯಾತರ ರಾಜ್ಯ ಸಂಚಾಲಕ ಇಕ್ಬಾಲ್ ಅಹಮದ್, ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಇಸ್ಮಾಯಿಲ್ ಪಲಿಮಾರ್, ಶಾಲಿನಿ ಶೆಟ್ಟಿ ಕೆಂಚನೂರು, ಉದಯ ಶೆಟ್ಟಿ ಕಾಪು, ಜಯರಾಮ ಆಚಾರ್ಯ ಕಾಪು, ಉದಯ ಶೆಟ್ಟಿ ಕಾಪು ಮೊದಲಾದ ವರು ಉಪಸ್ಥಿತರಿದ್ದರು.







