ಎನ್ಸಿಸಿ ಬದುಕಿನಲ್ಲಿ ಕ್ರೀಯಾತ್ಮತೆಯನ್ನು ಕಲಿಸುವ ಒಂದು ರಾಷ್ಟ್ರೀಯ ಸಂಘಟನೆ-ಕರ್ನಲ್ ಸಂಜಯ್ ದತ್ತ
ಫಿಲೋಮಿನಾದಲ್ಲಿ ಎನ್ಸಿಸಿ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ

ಪುತ್ತೂರು, ಡಿ.4: ಏಕತೆ ಮತ್ತು ಶಿಸ್ತು ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುವ ರಾಷ್ಟ್ರೀಯ ಕೆಡೆಟ್‌ಕಾರ್ಪ್ಸ್ ವಿದ್ಯಾರ್ಥಿಗಳ ಬದುಕಿನಲ್ಲಿ ಕ್ರೀಯಾತ್ಮತೆಯನ್ನು ಕಲಿಸುವ ಒಂದು ರಾಷ್ಟ್ರೀಯ ಸಂಘಟನೆ ಎಂದು ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿಯ ಕರ್ನಲ್ ಸಂಜಯ್ ದತ್ತ ಹೇಳಿದರು.
ಸಂತ ಫಿಲೋಮಿನಾ ಕಾಲೇಜು ಆವರಣದಲ್ಲಿ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಸಂಯೋಜಿತ ಹತ್ತು ದಿನಗಳ ವಾರ್ಷಿಕ ತರಬೇತಿ ಶಿಬಿರದ ಮುಖ್ಯಸ್ಥಿಕೆ ವಹಿಸಿದ ಅವರು ಸಂತ ಫಿಲೋಮಿನಾ ಪ್ರೌಢ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಶಿಬಿರಾಂಭ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಎನ್‌ಸಿಸಿ ಶಿಬಿರಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಶಿಸ್ತು, ಕರ್ತವ್ಯ ನಿಷ್ಠೆ, ವಿಶ್ವಾಸ, ಧೈರ್ಯ, ಸ್ವಾಲಂಬನೆ, ನಿಸ್ವಾರ್ಥ ಸೇವೆ, ದೇಶ ಭಕ್ತಿಯ ಭಾವನೆ ಮುಂತಾದವುಗಳನ್ನು ಬೆಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಬಿರದಲ್ಲಿ ಹಮ್ಮಿಕೊಳ್ಳಲಾದ ವಿವಿಧ ಚಟುವಟಿಕೆಗಳಾದ ದೈಹಿಕ ತರಬೇತಿ, ಡ್ರಿಲ್, ಶಸ್ತ್ರಾಸ್ತ ತರಬೇತಿ, ಮ್ಯಾಪ್ ರೀಡಿಂಗ್, ಕಂಪಾಸ್ ಬಳಕೆ, ಫೈರಿಂಗ್, ಎನ್‌ಸಿಸಿ ಪರೀಕ್ಷೆಗಳ ತರಬೇತಿ ಮುಂತಾದವುಗಳಲ್ಲಿ ಭಾಗವಹಿಸುವುದರೊಂದಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಿಗಲಿರುವ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರದ ಆಡಳಿತ ಅಧಿಕಾರಿ ಲೆಪ್ಟಿನೆಂಟ್ ಕರ್ನಲ್ ಸಂಜಯ್ ಆಪ್ಟೆ, ದಂಡಾಧಿಕಾರಿ ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೊನ್ಸನ್ ಡೇವಿಡ್ ಸಿಕ್ವೇರಾ, ಸುಭೇದಾರ್ ಮೇಜರ್ ವಿ ಹರಿಪ್ರಸಾದ್, ಸರಕಾರಿ ಪ್ರೌಢ ಶಾಲೆ ಸಿದ್ದಾಪುರದ ಫಸ್ಟ್ ಆಫೀಸರ್ ಚೇತನ್ ಕೆ ಜೆ, ಸರಕಾರಿ ಪದವಿ ಪೂರ್ವ ಕಾಲೇಜು ನಾಪೊಕ್ಲುನ ಸೆಕೆಂಡ್ ಆಫೀಸರ್ ಬಿ ಎಸ್ ಕೊಟಾಲೆ, ಸರಕಾರಿ ಪ್ರೌಢ ಶಾಲೆಯ ಸೆಕೆಂಡ್ ಆಫೀಸರ್ ಎ ಜಿ ಗಣೇಶ್, ಸೈನಿಕ್ಸ್ ಸ್ಕೂಲ್ಸ್ ಕೂಡಿಗೆಯ ಸೆಕೆಂಡ್ ಆಫೀಸರ್ ವೆಂಕಟರಮಣ, ಸಂತ ಫಿಲೋಮಿನಾ ಪ್ರೌಢ ಶಾಲೆ ಪುತ್ತೂರಿನ ಫಸ್ಟ್ ಆಫೀಸರ್ ಪೀಟರ್ ನರೇಶ್ ಲೋಬೊ, ವಿರಾಜಪೇಟೆಯ ಸಿಸಿಜಿ ಆಗಿರುವ ಪ್ರಿಯಾ, ದಕ ಜಿಲ್ಲೆಯ ಪುತ್ತೂರು, ಸುಳ್ಯ ತಾಲೂಕು ಮತ್ತು ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳ ಎನ್‌ಸಿಸಿ ಕೆಡೆಟ್‌ಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.







