‘ಚಿಣ್ಣರ ಸಂತರ್ಪಣೆ ಇನ್ನಷ್ಟು ಶಾಲೆಗಳಿಗೆ ವಿಸ್ತರಣೆ’ : ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದ

ಉಡುಪಿ, ಡಿ.4: 14 ವರ್ಷಗಳ ಹಿಂದೆ ತಮ್ಮ ಮೊದಲ ಪರ್ಯಾಯಾವಧಿ ಯಲ್ಲಿ ಪ್ರಾರಂಭಿಸಲಾದ ಮಠದ ಮೂಲಕ ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆ ‘ಚಿಣ್ಣರ ಸಂತರ್ಪಣೆ’ ಈಗಲೂ ಮುಂದುವರಿದಿದ್ದು, ಅದನ್ನು ತಮ್ಮ ಮುಂದಿನ ಪರ್ಯಾಯಾವಧಿಯಲ್ಲಿ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವುದಾಗಿ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
2018ರ ಜ.18ರಂದು ಎರಡನೇ ಬಾರಿ ಪರ್ಯಾಯ ಪೀಠಾರೋಹಣಕ್ಕೆ ಪೂರ್ವಭಾವಿಯಾಗಿ ಇಂದು ನಡೆದ ಬಾಳೆಮುಹೂರ್ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಮುಂದಿನ ಪರ್ಯಾಯದ ಅವಧಿಯಲ್ಲಿ ಕೈಗೊಳ್ಳುವ ಕೆಲ ಯೋಜನೆಗಳ ಕುರಿತು ವಿವರ ನೀಡಿದರು.
ಹಿಂದಿನ ಪರ್ಯಾಯದ ವೇಳೆ ತಾವು ಪ್ರತಿ ರವಿವಾರ ತುಳಸಿ ಲಕ್ಷಾರ್ಚನೆ ನಡೆಸುತಿದ್ದು, ಈ ಬಾರಿ ಪ್ರತಿದಿನ ಲಕ್ಷಾರ್ಚನೆ ಮಾಡುವ ಸಂಕಲ್ಪ ಮಾಡಿದ್ದೇನೆ. ಇದಕ್ಕಾಗಿ ಪಲಿಮಾರಿನ ಮೂಲ ಮಠದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ತುಳಸಿ ಗಿಡವನ್ನು ನೆಡಲು ಇಂದೇ ಮುಹೂರ್ತ ಮಾಡಲಾಗಿದೆ. ಅಲ್ಲಿಂದ ಪ್ರತಿದಿನ ತುಳಸಿ ಸರಬರಾಜು ಆಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಅಲ್ಲದೇ ಶ್ರೀಕೃಷ್ಣ ಮಠದಲ್ಲಿ ಪೂಜೆಗೆ ತುಳಸಿ ಹಾಗೂ ಇತರ ಪುಷ್ಪಗಳು ಇಲ್ಲೇ ನಿರಂತರವಾಗಿ ಸಿಗುವಂತಾಗಲು ಮಠದ ಬಳಿ ತುಳಸಿ-ಪುಷ್ಪ ಉದ್ಯಾನವನ ನಿರ್ಮಿಸಲು ಜಾಗದ ಹುಡುಕಾಟ ನಡೆಸಿರುವುದಾಗಿ ಹೇಳಿದ ಸ್ವಾಮೀಜಿ, ಆಸಕ್ತ ಬಡ ಮಕ್ಕಳಿಗೆ ಶಾಲಾ ವಿದ್ಯಾಭ್ಯಾಸದ ಜೊತೆಗೆ ಪರಂಪರೆಯ ವಿದ್ಯೆಯನ್ನು ನೀಡಲು ತಾವು ವಸತಿ ಹಾಗೂ ಪಾಠದ ವ್ಯವಸ್ಥೆ ಕಲ್ಪಿಸಲು ಯೋಜನೆ ಹಾಕಿಕೊಂಡಿರುವುದಾಗಿ ಹೇಳಿದರು.







