ಕಲಾವಿದರಿಗೆ ಕುಟುಂಬ, ಸಮಾಜದ ಬೆಂಬಲ ವಿದ್ದರೆ ಇನ್ನಷ್ಟು ಸಾಧನೆ ಸಾಧ್ಯ : ಬಿ.ರಮಾನಾಥ ರೈ

ಮಂಗಳೂರು ,ಡಿ.4:ಕಲಾ ಕ್ಷೇತ್ರದಲ್ಲಿ ನೋವು ,ಸಂಕಟಗಳನ್ನು ಅನುಭವಿಸಿ ಕೊಡುಗೆ ನೀಡುವ ಕಲಾವಿದರಿಗೆ ಕುಟುಂಬ,ಸಮಾಜದ ಬೆಂಬಲವಿದ್ದರೆ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂದು ರಾಜ್ಯದ ಅರಣ್ಯ ,ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ನಗರದ ಪುರಭವನದಲ್ಲಿ ವಿ.ಜಿ ಪಾಲ್ 75 ಸಮಾರಂಭದ ಕಾರ್ಯಕ್ರಮಗಳನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಂಗಳೂರಿನ ಸಾಂಸ್ಕ್ಕೃತಿಕ ಕ್ಷೇತ್ರದಲ್ಲಿ ಅಲ್ಲದೆ ಸಿನಿಮಾ ,ರಂಗ ಭೂಮಿ ಸೇರಿದಂತೆ ಹಲವು ದಶಕಗಳಿಂದ ಸಾಧನೆ ಮಾಡಿದ ವಿ.ಜಿ.ಪಾಲ್ ಬಣ್ಣದ ಬದುಕಿನಲ್ಲಿ ಸ್ವ ಪರಿಶ್ರಮದೊಂದಿಗೆ ಸಾಧನೆ ಮಾಡಿದವರು . ಅದಕ್ಕೆ ಅವರ ಕುಟುಂಬದ ಸಹಕಾರವೂ ಇದ್ದ ಕಾರಣ ನೋವಿಗಿಂತ ಹೆಚ್ಚು ನಲಿವನ್ನೇ ಕಾಣಲು ಸಾಧ್ಯವಾಗಿರಬೇಕು.ಅವರು ಕಲಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡುವಂತಾಗಲಿ ಎಂದು ಸಚಿವ ರಮಾನಾಥ ರೈ ಹಾರ್ಯೆಸಿದರು.
'ಮಂಗಳೂರು ಗರಡಿ ಮನೆ,ತುಳು ನಾಟಕಗಳಿಂದ ಖ್ಯಾತಿ ಪಡೆದಿದೆ'
ಮಂಗಳೂರು ಹಲವಾರು ವರುಷಗಳ ಹಿಂದಿನಿಂದಲೂ ಹೊರಗಿನ ಪ್ರದೇಶದ ಜನರನ್ನು ಇಲ್ಲಿನ ವ್ಯಾಯಾಮ ಶಾಲೆಗಳು (ಗರಡಿ ಮನೆಗಳು )ಮತ್ತು ಇಲ್ಲಿನ ತುಳು ರಂಗ ಭೂಮಿಯಿಂದ ಗುರುತಿಸಿಕೊಂಡಿದೆ ಎಂದು ಹಿರಿಯ ಸಾಹಿತಿ ಡಾ.ಬಿ.ಎ.ವಿವೇಕ ರೈ , ವಿ.ಜಿ.ಪಾಲ್ ಅಭಿನಂದನಾ ಗ್ರಂಥ ‘ಪಾಲ್ ಕಡಲ’ನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.
(ವಿ.ಜಿ.ಪಾಲ್)ವೇಣು ಗೋಪಾಲ ಕೋಟ್ಯಾನ್ ತಾಂತ್ರಿಕ ಶಿಕ್ಷಣ ಪಡೆದು ಮುಂಬಯಿಗೆ ತೆರಳಿ ಬಳಿಕ ಉದ್ಯೋಗ ನಿಮಿತ್ತ ಊರಿಗೆ ಮರಳಿದ ವ್ಯಕ್ತಿ ತನ್ನ ಆಸಕ್ತಿಯಿಂದ ಮಂಗಳೂರಿನ ರಂಗ ಭೂಮಿ ,ಸಾಹಿತ್ಯ ಕ್ಷೇತ್ರದ ಚಟುವಟಿಕೆಯಲ್ಲಿ ತುಳು ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾ ಸಾಧಕರಾಗಿದ್ದಾರೆ ಎಂದು ವಿವೇಕ ರೈ ಶುಭ ಹಾರೈಸಿದರು.
ಸಮಾರಂಭದ ವೇದಿಕೆಯಲ್ಲಿ ವಿ.ಜಿ.ಪಾಲ್ ಹಾಗೂ ಪತ್ನಿ ಸುಶೀಲಾ ವಿ.ಜಿ.ಪಾಲ್‌ರನ್ನು ಅತಿಥಿಗಳು ಸನ್ಮಾನಿಸಿದರು.
ಮನೋಹರ ಪ್ರಸಾದ್ ಅಭಿನಂದನಾ ಭಾಷಣ ಮಾಡಿದರು .ಚಲನಚಿತ್ರ ನಿರ್ದೇಶಕ ಸಂಜೀವ ದಂಡಕೇರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ವಿ.ರಮಣ್ ಸ್ವಾಗತಿಸಿದರು.







