ವರದಕ್ಷಿಣೆ ಪ್ರಕರಣದಲ್ಲಿ ಸಾಕ್ಷದ ಹೊರತು ಗಂಡನನ್ನು ದೋಷಿಯೆನ್ನುವಂತಿಲ್ಲ: ನ್ಯಾಯಾಲಯ

ಹೊಸದಿಲ್ಲಿ, ಡಿ.4: ಒಬ್ಬನ ಹೆಂಡತಿಯನ್ನು ನೇಣು ಬಿಗಿದು ಕೊಲ್ಲುವುದು ಹೀನ ಅಪರಾಧವೇ ಆಗಿದ್ದರೂ. ನಂಬಲರ್ಹ ಸಾಕ್ಷಗಳ ಹೊರತಾಗಿ ಗಂಡನನ್ನು ಅಪರಾಧಿಯೆಂದು ತೀರ್ಮಾನಿಸುವಂತಿಲ್ಲವೆಂದು ದಿಲ್ಲಿಯ ನ್ಯಾಯಾಲಯವೊಂದು ತೀರ್ಪ ನೀಡಿದೆ.
ವರದಕ್ಷಿಣೆ ಸಾವು ಹಾಗೂ ಕೊಲೆ ಪ್ರಕರಣವೊಂದರಲ್ಲಿ ಒಬ್ಬ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರನ್ನು ಅದು ಖುಲಾಸೆಗೊಳಿಸಿದೆ.
ವರದಕ್ಷಿಣೆಗಾಗಿ ಮಹಿಳೆಗೆ ಹಿಂಸೆ ನೀಡಲಾಗಿತ್ತೆಂಬುದಕ್ಕೆ ಯಾವುದೇ ಪ್ರಬಲ ಸಾಕ್ಷವಿಲ್ಲ ಎಂದಿರುವ ನ್ಯಾಯಾಲಯ, ಪೂರ್ವ ದಿಲ್ಲಿಯ ನಿವಾಸಿಗಳಾದ ಆಕೆಯ ಗಂಡ, ಆತನ ತಂದೆ ಹಾಗೂ ಇಬ್ಬರು ಸೋದರಿಯರನ್ನು ದೋಷ ಮುಕ್ತಿಗೊಳಿಸಿದೆ.
ಮನೆಯಲ್ಲಿ ಮಹಿಳೆಯ ಜೊತೆಗಾರನಾಗಿರುವ ಗಂಡನು ಆಕೆ, ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪರಿಸ್ಥಿತಿಯ ಬಗ್ಗೆ ವಿವರಿಸಲು ಶಕ್ತನಾಗಲೇಬೇಕೆಂಬುದು ಹೌದಾದರೂ, ಆರೋಪಿಯ ತಪ್ಪನ್ನು ಸಂಶಯಾತೀತವಾಗಿ ಸಾಬೀತುಪಡಿಸುವ ಹೊಣೆ ಪ್ರಾಸಿಕ್ಯೂಶನ್‌ನದಾಗಿದೆಯೆಂದು ಹೆಚ್ಚುವರಿ ಸತ್ರ ನ್ಯಾಯಾಧೀಶ ಸಂಜೀವ ಕುಮಾರ್ ಮಲ್ಹೋತ್ರಾ ತೀರ್ಪು ನೀಡಿದ್ದಾರೆ.
ಮೃತ ಮಹಿಳೆಗೆ ಉಗ್ಗು ಹಾಗೂ ಶ್ರವಣ ನೂನ್ಯತೆಯಿದ್ದರೆ, ಆಕೆಯ ಗಂಡ ಕಿವುಡ ಹಾಗೂ ಮೂಕನಾಗಿದ್ದಾನೆ.
ಪ್ರಾಸಿಕ್ಯೂಶನ್ ಆಪಾದಿತರ ವಿರುದ್ಧ ಆರೋಪವನ್ನು ನಿಸ್ಸಂಶಯವಾಗಿ ಸಾಬೀತುಪಡಿಸಲು ವಿಫಲವಾಗಿದೆಯೆಂದು ತೀರ್ಮಾನಿಸಿದ ನ್ಯಾಯಾಲಯ, ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.







