13 ಸಾವಿರ ಕೋಟಿ ಕಪ್ಪು ಹಣ ಘೋಷಿಸಿದ್ದಾತ ಪ್ರತ್ಯಕ್ಷ
ಹಣವು ರಾಜಕಾರಣಿಗಳು-ಅಧಿಕಾರಿಗಳಿಗೆ ಸೇರಿದ್ದು: ಟಿವಿ ಸಂದರ್ಶನದಲ್ಲಿ ಬಹಿರಂಗ

ಅಹ್ಮದಾಬಾದ್, ಡಿ.4: ಸೆಪ್ಟಂಬರ್‌ನಲ್ಲಿ ರೂ. 13 ಸಾವಿರ ಕೋಟಿಗೂ ಹೆಚ್ಚು ಕಪ್ಪು ಹಣವನ್ನು ಘೋಷಿಸಿದ ಬಳಿಕ ಕಳೆದ ತಿಂಗಳಿನಿಂದ ಕಾಣೆಯಾಗಿದ್ದ ಗುಜರಾತ್‌ನ ವ್ಯಾಪಾರಿ ಮಹೇಶ್ ಶಾ ಪ್ರತ್ಯಕ್ಷನಾಗಿದ್ದಾನೆ. ತಾನು ಘೋಷಿಸಿದ್ದ ಹಣವು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಬಿಲ್ಡರ್‌ಗಳ ಸಹಿತ ಹಲವರಿಗೆ ಸೇರಿದ್ದು. ತಾನು ಕೇವಲ ಮುಖವಾಗಿದ್ದೆನೆಂದು ಅವನಿಂದು ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಿದ್ದಾನೆ.
67ರ ಹರೆಯದ ಆತನನ್ನು ಸುಮಾರು 7 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು ಹಾಗೂ ಕೇವಲ ಆರೋಗ್ಯದ ನೆಲೆಯಲ್ಲಿ ಆತನನ್ನು ಬಿಡಲಾಯಿತು. ಮುಂದಿನ ವಿಚಾರಣೆಗಾಗಿ ನಾಳೆ ಹಾಜರಾಗುವಂತೆ ಶಾಗೆ ಸೂಚಿಸಲಾಗಿದೆ.
ನ.30ರ ಕೆಲವು ದಿನಗಳ ಹಿಂದೆಯೇ ಕಾಣೆಯಾಗಿದ್ದ ಶಾ ರವಿವಾರ ಸ್ಥಳೀಯ ವಾಹಿನಿಯೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ತಾನು ಘೋಷಿಸಿದ್ದ ಹಣ ತನ್ನದಲ್ಲ. ಅದನ್ನು ತನಗೆ ರಾಜಕಾರಣಿಗಳು ನೀಡಿದ್ದರೆಂದು ಸಂದರ್ಶನವೊಂದರಲ್ಲಿ ಆತ ಹೇಳಿದ್ದಾನೆ.
ಈ ಸಂದರ್ಶನದ ಬಳಿಕ ನಡೆದ ನಾಟಕೀಯ ಘಟನೆಯಲ್ಲಿ ಶಾನನ್ನು ಪೊಲೀಸರು ಹಾಗೂ ತೆರಿಗೆ ಅಧಿಕಾರಿಗಳು ವಿಚಾರಣೆಗಾಗಿ ಸ್ಟುಡಿಯೊದಿಂದಲೇ ಅಜ್ಞಾತ ಸ್ಥಳವೊಂದಕ್ಕೆ ಒಯ್ದಿದ್ದರು.





