ಭಯೋತ್ಪಾದನೆಗೆ ಒಂದೇ ದೇಶವನ್ನು ದೂರಬೇಡಿ: ಅಝೀಝ್

ಹೊಸದಿಲ್ಲಿ, ಡಿ.4: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿರುವುದಕ್ಕಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದೆ ಕೆಲವೇ ತಾಸುಗಳಲ್ಲಿ, ಭಯೋತ್ಪಾದನೆಗಾಗಿ ಒಂದೇ ದೇಶವನ್ನು ನಿಂದಿಸಬೇಡಿರೆಂದು ಪಾಕಿಸ್ತಾನ ಹೇಳಿದೆ.
ಒಂದೇ ದೇಶವನ್ನು ದೂಷಿಸುವ ಬದಲು ತಾವು ಒಂದು ಉದ್ದೇಶ ಹಾಗೂ ಸಮಗ್ರ ದೃಷ್ಟಿಯನ್ನು ಇರಿಸಿಕೊಳ್ಳುವುದು ಅಗತ್ಯವೆಂದು ಪಾಕಿಸ್ತಾನದ ಪ್ರಧಾನಿಯ ವಿದೇಶಾಂಗ ಸಲಹೆಗಾರ ಸರ್ತಾಜ್ ಅಝೀಝ್, ಹಾರ್ಟ್ ಆಫ್ ಏಶ್ಯ ಸಮ್ಮೇಳನದಲ್ಲಿ ಹೇಳಿದರೆಂದು ಪಾಕಿಸ್ತಾನಿ ರಾಯಭಾರಿ ಅಬ್ದುಲ್ ಬಾಸಿತ್ ತಿಳಿಸಿದ್ದಾರೆ.
ಬಾಕಿಯುಳಿದಿರುವ ವಿವಾದಗಳ ಶಾಂತಿಯುತ ಪರಿಹಾರದಿಂದ ಪ್ರಾದೇಶಿಕ ಸಹಕಾರ ಹಾಗೂ ಸಂಪರ್ಕ ಇನ್ನಷ್ಟು ಸುಧಾರಿಸಲಿಯೆಂದು ಅಝೀಝ್ ಹೇಳಿದರೆಂದು ವರದಿಯಾಗಿದೆ.
ಘನಿ ಪಾಕಿಸ್ತಾನವನ್ನು ತಿವಿಯಲು ಈ ಸಂದರ್ಭವನ್ನು ಬಳಸಿಕೊಂಡಿದ್ದರು. ಭಯೋತ್ಪಾದನೆಯನ್ನು ರಫ್ತು ಮಾಡುತ್ತಿರುವುದಕ್ಕಾಗಿ ಪಾಕಿಸ್ತಾನದ ವಿರುದ್ಧ ಕಿಡಿಗಾರಿದ ಅವರು, ಅಫ್ಘಾನಿಸ್ತಾದ ಪುನನಿರ್ಮಾಣಕ್ಕೆ ಇಸ್ಲಾಮಾಬಾದ್ ವಾಗ್ದಾನ ಮಾಡಿರುವ 50 ಕೋಟಿ ಡಾಲರ್‌ಗಳನ್ನು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಇನ್ನಷ್ಟು ಉತ್ತಮವಾಗಿ ಬಳಸಲಾಗುವುದು. ತನಗೆ ಬಯ್ದೆಟದಲ್ಲಿ ತೊಡಗುವ ಮನಸಿಲ್ಲವಾದರೂ, ಕೆಲವು ದೇಶಗಳು ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವುದು ವಾಸ್ತವ ವಿಚಾರವಾಗಿದೆ ಎಂದಿದ್ದಾರೆ.
ಕಳೆದ ವರ್ಷ ಅಫ್ಘಾನ್‌ನಲ್ಲಿ ಅತಿ ಹೆಚ್ಚು ಹತ್ಯೆಗಳು ನಡೆದಿವೆ. ಅದು ಒಪ್ಪತಕ್ಕದಲ್ಲ. ಕೆಲವರು ಭಯೋತ್ಪಾದಕರಿಗೆ ಈಗಲೂ ಆಶ್ರಯ ನೀಡುತ್ತಿದ್ದಾರೆ. ತಮಗೆ ಪಾಕಿಸ್ತಾನ ಆಶ್ರಯ ನೀಡದಿರುತ್ತಿದ್ದರೆ, ತಾವು ಒಂದು ತಿಂಗಳೂ ಉಳಿಯುವುದು ಸಾಧ್ಯವಿರಲಿಲ್ಲವೆಂದು ಇತ್ತೀಚೆಗೆ ತಾಲಿಬಾನ್ ಉಗ್ರನೊಬ್ಬ ಹೇಳಿದ್ದಾನೆಂದು ಘನಿ ತಿಳಿಸಿದ್ದಾರೆ.
ಇದೇ ವೇಳೆ, ಅಶ್ರಫ್ ಘನಿಯವರ ಹೇಳಿಕೆ ವಿಷಾದನೀಯವೆಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.







