ಹಣದುಬ್ಬರ ಪ್ರಮಾಣದಲ್ಲಿ ಇಳಿಕೆ: ಬಡ್ಡಿದರದಲ್ಲಿ ಮತ್ತೆ ಕಡಿತದ ನಿರೀಕ್ಷೆ

ಹೊಸದಿಲ್ಲಿ, ಡಿ.4: ನೋಟು ಅಮಾನ್ಯ ನಿರ್ಧಾರದ ಪರಿಣಾಮವನ್ನು ಸಹ್ಯವಾಗಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಬುಧವಾರ ನಡೆಯಲಿರುವ ಕಾರ್ಯನೀತಿ ಪರಾಮರ್ಶೆ ಸಭೆಯಲ್ಲಿ ಶೇಕಡಾ 0.25ರಷ್ಟು ಬಡ್ಡಿದರ ಕಡಿತ ಮಾಡುವ ನಿರೀಕ್ಷೆಯನ್ನು ಬಹುತೇಕ ಬ್ಯಾಂಕ್‌ಗಳು ವ್ಯಕ್ತಪಡಿಸಿವೆ.
ನೋಟು ಅಮಾನ್ಯಗೊಳಿಸಿದ ಬಳಿಕ ನಡೆಯುವ ಮೊತ್ತಮೊದಲ ಕಾರ್ಯನೀತಿ ಪರಾಮರ್ಶೆ ಸಭೆ ಇದಾಗಿದೆ.
ಅಕ್ಟೋಬರ್‌ನಲ್ಲಿ ಆರ್‌ಬಿಐ ಗವರ್ನರ್ ಹುದ್ದೆಗೇರಿದ ಬಳಿಕ ತನ್ನ ಪ್ರಥಮ ಕಾರ್ಯನೀತಿ ಪರಾಮರ್ಶೆ ಸಭೆಯಲ್ಲಿ ಪಟೇಲ್ ರೆಪೋ ದರ(ಕಡಿಮೆ ಅವಧಿಯ ಸಾಲದ ಮೇಲಿನ ಬಡ್ಡಿದರ)ವನ್ನು ಶೇ.0.25ರಷ್ಟು ಕಡಿತಗೊಳಿಸಿದ್ದರು. ಹಣಕಾಸು ಕಾರ್ಯನೀತಿ ಸಮಿತಿಯ ವರದಿಯ ಆಧಾರದಲ್ಲಿ ಸಿದ್ದಪಡಿಸಲಾದ ಎರಡನೇ ಕಾರ್ಯನೀತಿ ಇದಾಗಿದೆ. ಜನವರಿ 2015ರಿಂದ ಆರ್‌ಬಿಐ ರೆಪೋ ದರದಲ್ಲಿ ಶೇ.1.75ರಷ್ಟು ಕಡಿತ ಮಾಡಿದೆ.
ಹಣದುಬ್ಬರ ಕಡಿಮೆಯಾಗುತ್ತಿರುವ ಕಾರಣ ಆರ್‌ಬಿಐ ರೆಪೋ ದರದಲ್ಲಿ 25 ಮೂಲ ಅಂಶದಷ್ಟು ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಕೆನರಾ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಶರ್ಮ ತಿಳಿಸಿದ್ದಾರೆ. ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ಐಡಿಬಿಐ ಬ್ಯಾಂಕ್ ಮುಖ್ಯ ಆರ್ಥಿಕ ಅಧಿಕಾರಿ ಆರ್.ಕೆ.ಬನ್ಸಾಲ್, ಆರ್‌ಬಿಐ ರೆಪೋ ದರವನ್ನು ಶೇ.6ಕ್ಕೆ ನಿಗದಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೋಟು ಅಮಾನ್ಯ ನಿರ್ಧಾರದ ಪರಿಣಾಮ ಹೊಸ ಎರಡು ತ್ರೈಮಾಸಿಕ ಅವಧಿಯ ಸಾಧನೆಯಿಂದ ವ್ಯಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ. ನವೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣವು ಶೇ.4ಕ್ಕಿಂತಲೂ ಕಡಿಮೆ ಇರಲಿದೆ ಎಂದು ಎಂದು ಸ್ಟೇಟ್ ಬ್ಯಾಂಕ್ ತಿಳಿಸಿದೆ. ಅಕ್ಟೋಬರ್‌ನಲ್ಲಿ ರಖಂ ಹಣದುಬ್ಬರ ಪ್ರಮಾಣ ಶೇ.4.20ರಷ್ಟಿದ್ದರೆ ಸಗಟು ಹಣದುಬ್ಬರ ಪ್ರಮಾಣ ಶೇ.3.39ರಷ್ಟಿತ್ತು.
ನೋಟು ಅಮಾನ್ಯ ನಿರ್ಧಾರದಿಂದ ಗ್ರಾಹಕರ ಬೇಡಿಕೆಯಲ್ಲಿ ವ್ಯತ್ಶಾಸವಾಗುವ ಕಾರಣ ಹಣದುಬ್ಬರ ಪ್ರಮಾಣವೂ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಕಾರಣ ರೆಪೋ ದರದ ಮೂಲಾಂಶದಲ್ಲಿ 25ರಿಂದ 50ರಷ್ಟು ಕಡಿತಗೊಳ್ಳುವ ನಿರೀಕ್ಷೆಯಿದೆ ಎಂದು ಹಿರಿಯ ಎಸ್‌ಬಿಐ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮಾರುಕಟ್ಟೆ ಸ್ಥಿರೀಕರಣ ಯೋಜನೆ(ಎಂಎಸ್‌ಎಸ್)ಯ ಪರಿಮಿತ ನಿಧಿಯನ್ನು 30 ಸಾವಿರ ಕೋಟಿ ರೂ.ನಿಂದ 6 ಲಕ್ಷ ಕೋಟಿಗೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹೆಚ್ಚಳಗೊಂಡ ನಗದು ಮೀಸಲು ಅನುಪಾತ ಮುಂದುವರಿಯದು ಎಂದು ನಿರೀಕ್ಷಿಸಲಾಗಿದೆ. 2016ರ ಸೆ.16ರಿಂದ ನ.11ರವರೆಗಿನ ಅವಧಿಯಲ್ಲಿ ಮಾಡಲಾದ ಠೇವಣಿಯ ಮೇಲೆ ಶೇ.100ರಷ್ಟು ನಗದು ಮೀಸಲು ಅನುಪಾತವನ್ನು ಅನುಸರಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು.







