ಲಿಂಗತಾರತಮ್ಯ ಎದುರಿಸಿಲ್ಲ : ಸ್ಮತಿ ಇರಾನಿ

ಮುಂಬೈ, ಡಿ.4: ಟಿ.ವಿ. ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದ ಸಂದರ್ಭ ಅಥವಾ ರಾಜಕೀಯ ಕ್ಷೇತ್ರದಲ್ಲಿ ತನಗೆ ಎಂದು ಕೂಡಾ ಲಿಂಗ ತಾರತಮ್ಯದ ಅನುಭವ ಆಗಿಲ್ಲ ಎಂದು ಮಾಜಿ ನಟಿ, ಹಾಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ತಿಳಿಸಿದ್ದಾರೆ.
ಟಿ.ವಿಯಲ್ಲಿ ಸುದೀರ್ಘಾವಧಿ ಪ್ರಸಾರಗೊಂಡ ‘ಕ್ಯೋಂಕಿ ಸಾಸ್ ಬೀ ಕಭೀ ಬಹೂ ಥಿ’ ಎಂಬ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಅಭಿನಯಿಸಿ ವೀಕ್ಷಕರ ಮನ ಗೆದ್ದಿದ್ದ ಇರಾನಿ ಬಳಿಕ ರಾಜಕೀಯ ಪ್ರವೇಶಿದ್ದರು. ಬಿಜೆಪಿ ಪಕ್ಷ ಸೇರಿದ ಅವರು ಕೇಂದ್ರದಲ್ಲಿ ಸಚಿವೆಯಾದರು.
ಟಿ.ವಿ.ಕ್ಷೇತ್ರದಲ್ಲಿ ಲೇಖಕಿ, ನಿರ್ಮಾಪಕಿ, ಸಹಾಯಕ ನಿರ್ದೇಶಕಿಯಾಗಿ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಆದರೆ ಎಲ್ಲೂ ಕೂಡಾ ಲಿಂಗತಾರತಮ್ಯದ ಧೋರಣೆ ನನ್ನ ಅನುಭವಕ್ಕೆ ಬಂದಿಲ್ಲ ಎಂದು ಸ್ಮತಿ ಇರಾನಿ ತಿಳಿಸಿದ್ದಾರೆ. ಒಂದು ಕಾಲದ ನಟಿ ಎಂದು ನನ್ನ ಬಗ್ಗೆ ಒಂದು ಸಂದರ್ಭದಲ್ಲಿ ಹೇಳಿಕೆ ನೀಡಲಾಗಿತ್ತು. ನೀನೊಬ್ಬಳು ಮಹಿಳೆ ಎನ್ನುವ ಮೂಲಕ ಮಹಿಳೆಯನ್ನು ಪರಿಹಾಸ್ಯ ಮಾಡಲಾಗುತ್ತಿದೆ. ಕೆಲವರು ತನ್ನನ್ನು ಕೀಳಂದಾಜಿಸಲು ಯತ್ನಿಸಿದರೂ ಹೆಚ್ಚಿನ ಜನ ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಅವರು ನುಡಿದರು.
ಟಿವಿ ಚಾನೆಲ್ ಒಂದು ನಡೆಸಿಕೊಟ್ಟ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ದಿನದ ಕೊನೆಯಲ್ಲಿ ಓರ್ವರು ಮಾಡುವ ಕಾರ್ಯವನ್ನು ಜನರು ಗುರುತಿಸುತ್ತಾರೆ. ಇಲ್ಲಿ ಗಂಡು ಅಥವಾ ಹೆಣ್ಣು ಎಂಬ ಮಾನದಂಡವಿಲ್ಲ ಎಂದ ಅವರು, ಮಹಿಳೆಯರು ಈ ದೇಶದಲ್ಲಿ ಅತ್ಯುನ್ನತ ಸ್ಥಾನಕ್ಕೇರಿರುವುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು. ಈ ದೇಶದಲ್ಲಿ ಮಹಿಳೆ ರಾಷ್ಟ್ರಪ್ರತಿ ಸ್ಥಾನದಲ್ಲಿ, ಪ್ರಧಾನಮಂತ್ರಿ ಸ್ಥಾನದಲ್ಲಿ ಮಿಂಚಿದ್ದರು. ಪ್ರಸ್ತುತ ಲೋಕಸಭೆ ಸ್ಪೀಕರ್ ಆಗಿ, ವಿರೋಧ ಪಕ್ಷದ ನಾಯಕಿಯಾಗಿ.. ಹೀಗೆ ಸಮಾಜದ ಅತ್ಯುನ್ನತ ಸ್ಥಾನದಲ್ಲಿ ಮಹಿಳೆಯರನ್ನು ಕಾಣಲು ಸಾಧ್ಯ. ಇದೊಂದು ಹೆಮ್ಮೆಯ ವಿಷಯ ಎಂದು ಸ್ಮತಿ ಇರಾನಿ ಹೇಳಿದರು.







