ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಸಾಂಧರ್ಭಿಕ ಚಿತ್ರ
ಮಂಗಳೂರು, ಡಿ. 4: ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆ ಮಾಲಕನಿಗೆ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ರವಿವಾರ ಮುಂಜಾನೆ ಪಡೀಲ್ ಕ್ಯಾಂಪ್ಕೋ ಕ್ವಾಟ್ರಸ್ ಬಳಿ ನಡೆದಿದೆ.
ಹಲ್ಲೆಗೊಳಗಾದ ಮನೆಮಾಲಕನನ್ನು ಭರತ್ ಆಳ್ವ ಎಂದು ಗುರುತಿಸಲಾಗಿದೆ.
ಭರತ್ ಕಳೆದ 7 ತಿಂಗಳಿನಿಂದ ಈ ಪರಿಸರದಲ್ಲಿ ವಾಸವಾಗಿದ್ದು, ಶನಿವಾರ ಇವರ ಪತ್ನಿ ತಾಯಿ ಮನೆಗೆ ಹೋಗಿದ್ದರು. ಭರತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಾತ್ರಿ ಸುಮಾರು 10 ಗಂಟೆಗೆ ಮರಳಿ ಬಂದಿದ್ದರು. ತಡರಾತ್ರಿ 2.30 ವೇಳೆಗೆ ಮನೆ ಬಾಗಿಲು ಬಡಿದ ಶಬ್ದ ಕೇಳಿ ಹೊರ ಬಂದು ನೋಡಿದಾಗ, ಮೂರು ಮಂದಿಯ ತಂಡ ಬಾಗಿಲು ಬಡಿಯುತ್ತಿತ್ತು. ಈ ಪೈಕಿ ಇಬ್ಬರ ಬಳಿ ತಲವಾರು ಇದ್ದು, ಇದರಿಂದ ಭಯಗೊಂಡ ಭರತ್ ಆಳ್ವ ಬಾಗಿಲು ತೆರೆಯಲಿಲ್ಲ.
ದರೋಡೆಕೋರರು ಬಾಗಿಲು ಮುರಿದು ಒಳಬರಲು ಪ್ರಯತ್ನಪಟ್ಟಾಗ ಭಯಗೊಂಡ ಮನೆ ಮಾಲಕ ಹಿಂದಿನ ಬಾಗಿಲಿನಿಂದ ಹೊರಬಂದು ಬೊಬ್ಬೆ ಹಾಕಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಒಬ್ಬಾತ ಬೆನ್ನಟ್ಟಿ ಬಂದು ತಲವಾರು ಬೀಸಿದ್ದು, ಭರತ್ರ ಕೈ, ಮೊಣಗಂಟಿಗೆ ಗಾಯವಾಗಿದೆ. ಬಳಿಕ ದರೋಡೆಕೋರರು ಪರಾರಿಯಾಗಿದ್ದಾರೆ.
ನೆರೆಮನೆಯವರನ್ನು ಎಚ್ಚರಿಸಿ, ಅವರ ಸಹಾಯದಿಂದ ಭರತ್ ಅವರು ಮರಳಿ ಮನೆಗೆ ಹೋದಾಗ ಬೆಡ್ರೂಮ್ನಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, 8ಗ್ರಾಂ ಚಿನ್ನದ ಸರ, 9 ಗ್ರಾಂನ ಚಿನ್ನದ ಕಡಗ, 2 ಸಾವಿರ ರೂ.ನಗದು, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಪರ್ಸ್ನ್ನು ದರೋಡೆಕೋರರು ಕೊಂಡೊಯ್ದಿದ್ದಾರೆ.
ಕಳವಾಗಿರುವ ವಸ್ತುವಿನ ವೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







