ಮಮತಾ ಪ್ರಾಮಾಣಿಕತೆ ಮತ್ತು ಸರಳತೆಯ ಸಂಕೇತ,ಪ್ರಧಾನಿಯಾಗಲು ಅರ್ಹ:ರಾಮದೇವ್ ಹೊಗಳಿಕೆ

ಕೋಲ್ಕತಾ,ಡಿ.4: ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಎಂದೇ ಗುರುತಿಸಿಕೊಂಡಿರುವ ಯೋಗಗುರು ಬಾಬಾ ರಾಮದೇವ್ ಅವರು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಅವರು ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ ಎಂದಿದ್ದಾರೆ.
ಶನಿವಾರ ಇಲ್ಲಿ ವಿಚಾರ ಸಂಕಿರಣವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಮಮತಾರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಯೇ ಇಲ್ಲ. ಓರ್ವ ಚಾಯ್‌ವಾಲಾ ಪ್ರಧಾನಿಯಾಗಬಹುದಾದರೆ ಮಮತಾ ಅವರೂ ಪ್ರಧಾನಿಯಾಗಬಹುದು ಎಂದರು.
ರಾಜಕೀಯದಲ್ಲಿ ಮಮತಾ ಪ್ರಾಮಾಣಿಕತೆ ಮತ್ತು ಸರಳತೆಯ ಸಂಕೇತವಾಗಿದ್ದಾರೆ. ಅವರ ಸರಳತೆಯನ್ನು ನಾನು ಮೆಚ್ಚುತ್ತೇನೆ.. ಅವರು ಮುಖ್ಯಮಂತ್ರಿಯಾಗಿದ್ದರೂ ಸಾದಾ ಸೀರೆಗಳನ್ನೇ ಉಡುತ್ತಾರೆ. ಕಾಲಿಗೆ ಸಾದಾ ಚಪ್ಪಲಿಗಳನ್ನೇ ಹಾಕುತ್ತಾರೆ. ಅವರ ಬಳಿ ಕಪ್ಪುಹಣವಿಲ್ಲವೆಂದು ನಾನು ನಂಬಿದ್ದೇನೆ ಎಂದ ರಾಮದೇವ್, ಎಡರಂಗವು ಅಧಿಕಾರ ದಲ್ಲಿದ್ದಾಗ ಒಮ್ಮೆ ನನ್ನ ಪ.ಬಂಗಾಲ ಭೇಟಿಯ ಸಂದರ್ಭ ಎಡರಂಗವು ತೊಲಗಬೇಕು ಮತ್ತು ಮಮತಾ ಅಧಿಕಾರಕ್ಕೆ ಬರಬೇಕು ಎಂದು ನಾನು ಹೇಳಿದ್ದೆ. ಆ ಬಳಿಕ ಹಾಗೆಯೇ ಅಗಿದೆ ಎಂದರು.
ತಾನು ಪ್ರಬಲವಾಗಿ ಬೆಂಬಲಿಸಿರುವ ನೋಟು ರದ್ದತಿಯನ್ನು ಮಮತಾ ವಿರೋಧಿಸು ತ್ತಿದ್ದರೂ ಅವರ ಬಗ್ಗೆ ಮೃದು ಧೋರಣೆಯನ್ನು ತಳೆದ ರಾಮದೇವ್,ಅವರು ನಿಜಕ್ಕೂ ಈ ಕ್ರಮದ ಅನುಷ್ಠಾನ ವಿಧಾನಗಳ ವಿರುದ್ಧವಾಗಿದ್ದಾರೆ ಎಂದರು.







