ಅಲ್ಪಸಂಖ್ಯಾತರ ಹಕ್ಕುಗಳಿಗೆ ಆಗ್ರಹ
ಎಸ್‌ಡಿಪಿಐಯಿಂದ ಉಪವಾಸ ಸತ್ಯಾಗ್ರಹ,
.jpg)
ಹಾಸನ, ಡಿ.4: ಅಲ್ಪಸಂಖ್ಯಾತರ ಹಕ್ಕುಗಳನ್ನು ಸಮರ್ಪಕವಾಗಿ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಅಲ್ಪಸಂಖ್ಯಾತರನ್ನು ಎಲ್ಲ ಪಕ್ಷಗಳು ಓಟ್ ಬ್ಯಾಂಕ್‌ಗಾಗಿ ಉಪಯೋಗಿಸಿಕೊಳುತ್ತಿವೆ. ಅವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮೇಲೆತ್ತುವ ಮತ್ತು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿಲ್ಲಿ ಎಂದು ದೂರಿದರು.
ಅಲ್ಪಸಂಖ್ಯಾತ ವರ್ಗದಲ್ಲಿ ಬಹಳ ದೊಡ್ಡ ಸಮುದಾಯವಾಗಿರುವ ಮುಸ್ಲಿಮ್ ಅತ್ಯಂತ ಹಿಂದುಳಿದ ವರ್ಗವಾಗಿದ್ದಾರೆ. ಇವರು ದಲಿತ ಸಮುದಾಯಕ್ಕಿಂತಲೂ ದಯನೀಯ ಬದುಕು ಸಾಗಿಸುತ್ತಿದ್ದಾರೆ ಎಂದು ಜಸ್ಟೀಸ್ ರಾಜೇಂದರ್ ಸಿಂಗ್ ಸಾಚಾರ್ ಸಮಿತಿ 2006 ರಲ್ಲಿಯೇ ಕೇಂದ್ರ ಸರಕಾರಕ್ಕೆ ವರದಿ ನೀಡಿತ್ತು. ನಂತರ ಈ ಸಮಿತಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪೂರಕವಾದ ಹಲವು ಶಿಫಾರಸುಗಳನ್ನು ಕೇಂದ್ರ ಸರಕಾರಕ್ಕೆ ಮಾಡಿತ್ತು.
ಆದರೆ ಇದುವರೆಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವ ಗಮನಾರ್ಹ ಪ್ರಗತಿಯ ಕಂಡು ಬಂದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.ರಾಜೀದರ್ ಸಾಚಾರ್ ವರದಿ ಶಿಫಾರಸುಗಳು ಜಾರಿಗೊಂಡಿಲ್ಲ. ಮೀಸಲಾತಿಯಲ್ಲಿ ರಂಗನಾಥ್ ಮಿಶ್ರಾ ಸಮಿತಿಯ ಶಿಫಾರಸು ಕೂಡ ಜಾರಿಯಾಗಿಲ್ಲ. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿಲ್ಲ. ಅಲ್ಪಸಂಖ್ಯಾತರ ವಿದ್ಯಾಸಿರಿ ಯೋಜನೆಯಲ್ಲಿ 2015-16ನೆ ಸಾಲಿನಲ್ಲಿ 38,358 ವಿದ್ಯಾರ್ಥಿಗಳ ಅರ್ಜಿ ಮಂಜೂರಾಗಿದ್ದು, ಪ್ರತೀ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಪಾವತಿ ಮಾಡಬೇಕು. ಆದರೆ ಇದುವರೆಗೂ 6 ಸಾವಿರ ರೂ. ಮಾತ್ರ ನೀಡಿದೆ.
ಇಂತಹ ಹಲವಾರು ರೀತಿಯಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದ್ದರೂ ಜನಪ್ರತಿನಿಧಿಗಳು ಸರಕಾರದ ಗಮನಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಪೈರೋಝ್ ಪಾಷ, ಜಿಲ್ಲಾ ಪ್ರ.ಕಾರ್ಯದರ್ಶಿ ಸಿದ್ದೀಕ್ ಅನೆಮಹಲ್,ಸೂಫಿ ಅಹ್ಮದ್, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಡಿ. ಶಿವಮ್ಮಾ, ಸಮತ ಸೈನಿಕ ದಳದ ಅಧ್ಯಕ್ಷ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.







