ಡಿ.8ರಂದು ಸಿಎಂ ಸಿದ್ದರಾಮಯ್ಯ ಮೂಡಿಗೆರೆಗೆ

ಚಿಕ್ಕಮಗಳೂರು, ಡಿ.4: ಜಿಲ್ಲೆಯ ಮಲೆನಾಡು ಭಾಗದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜ ಸುಧಾರಣೆಗಾಗಿ ದುಡಿದ ದಾರದ ಹಳ್ಳಿಯ ಡಿ.ಎಸ್.ಕೃಷ್ಣಪ್ಪಗೌಡರ ಜನ್ಮ ಶತಮಾನೋತ್ಸವ ಸಮಾರೋಪ ಡಿ.8ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಕೇಂದ್ರ ಮಾಜಿ ಸಚಿವೆ ಡಿ.ಕೆ.ತಾರಾದೇವಿ ತಿಳಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತ ನಾಡಿ, ಕೃಷ್ಣಪ್ಪಗೌಡರು ತಮ್ಮ ಜೀವಿತಾವಧಿಯಲ್ಲಿ ಸ್ವಾತಂತ್ರ್ಯಹೋರಾಟದ ಜೊತೆಗೆ ಅನೇಕ ಸಾಮಾಜಿಕ ಕಾರ್ಯ ಗಳಲ್ಲಿ ತೊಡಗಿಸಿಕೊಂಡವರು.ಮಹಾತ್ಮ ಗಾಂಧೀಜಿ ಅವರಿಂದ ಪ್ರೇರಿತರಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಲ್ಲದೆ ಜೈಲುವಾಸವನ್ನು ಅನುಭವಿಸಿದವರು ಎಂದು ಹೇಳಿದರು.
ಕೃಷ್ಣಪ್ಪಗೌಡರು ಮೂಡಿಗೆರೆ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರು. ಅವರ ಒತ್ತಾಸೆಯಿಂದಾಗಿ ಅನೇಕ ಸಣ್ಣ ಹಿಡುವಳಿದಾರರು ಕಾಫಿ ತೋಟಗಳನ್ನು ಮಾಡಿದರು. ಅವರ ಹುಟ್ಟೂರು ದಾರದಹಳ್ಳಿಯಲ್ಲಿನ ಶಾಲೆ, ಆಸ್ಪತ್ರೆ, ವಿದ್ಯುತ್ ಸಂಪರ್ಕ,ರಸ್ತೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅವರು ಕಾರಣರಾಗಿದ್ದರು.ಅನೇಕ ಗ್ರಾಮಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವರು ನೆರವಾಗಿದ್ದರು. ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನು ಕರೆಸಿ ಶಾಲೆ ಉದ್ಘಾಟಿಸಿದ್ದರು.ಹೀಗೆ ಅತ್ಯಂತ ಜನಪ್ರಿಯತೆ ಪಡೆದಿದ್ದ ಕೃಷ್ಣಪ್ಪಗೌಡರು ತಮ್ಮ 54ನೆ ವರ್ಷದಲ್ಲಿ ತಾವೇ ಚಲಾಯಿಸುತ್ತಿದ್ದ ಜೀಪ್ ಅಪಘಾತದಲ್ಲಿ ಮೃತಪಟ್ಟರು ಎಂದು ವಿವರಿಸಿದರು.
ಅವರ ಅಭಿಮಾನಿಗಳ ಆಕಾಂಕ್ಷೆಯಂತೆ ಕೃಷ್ಣಪ್ಪಗೌಡರ ಜನ್ಮಶತಮಾನೋತ್ಸವಕ್ಕೆ ಎಲ್ಲಾ ಧರ್ಮ,ಜಾತಿ,ಮತದ ಭೇದವಿಲ್ಲದೆ ಬೆಂಬಲ ವ್ಯಕ್ತವಾಗಿದೆ. ಈ ಕಾರ್ಯ ಕ್ರಮದ ಅಂಗವಾಗಿ ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯಂದು ಮೂಡಿಗೆರೆ ತಾಲೂಕಿನ ಪ್ರತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಗಿದ್ದು, ಜೊತೆಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಮಂಗಳೂರಿನ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ನುಡಿದರು.
ಡಿ.8ರಂದು ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ಆದಿ ಚುಂಚನಗಿರಿಯ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವರಾದ ಡಾ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್,ಎಂ.ಕೃಷ್ಣಪ್ಪ, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ, ಬಿ.ಎಲ್.ಶಂಕರ್ ಸೇರಿದಂತೆ ಜಿಲ್ಲೆಯ ಎಲ್ಲಾ ಮಾಜಿ ಹಾಗೂ ಹಾಲಿ ಶಾಸಕರು, ಇತರ ಜನ ಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೃಷ್ಣಪ್ಪಗೌಡ ಕುರಿತಂತೆ ಪುಸ್ತಕ ಬರೆದಿರುವ ಲೇಖಕ ಪ್ರೊ. ಜಯಪ್ಪ ಗೌಡ, ಯು.ಆರ್.ಚಂದ್ರೇಗೌಡ ಉಪಸ್ಥಿತರಿದ್ದರು.







