ಜಾತಿಗಳಿಂದ ಒಡೆದಿರುವ ಸಮಾಜವನ್ನು ಒಗ್ಗೂಡಿಸಬೇಕಿದೆ: ಶ್ರೀಧರ್ ಪ್ರಭು
ಜಿಲ್ಲಾ ಮಟ್ಟದ ವಿಚಾರ ಸಂಕಿರಣ,

ಮಡಿಕೇರಿ ಡಿ.4 : ಪ್ರಜೆಗಳೇ ಪ್ರಭುಗಳು ಎನ್ನುವ ಮಹತ್ವಾಕಾಂಕ್ಷೆಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮನುವಾದಿಗಳ ಆಕ್ರಮಣ ಹೆಚ್ಚಾಗಿದ್ದು, ಪ್ರಜೆಗಳು ಪ್ರಭುಗಳಾಗಬೇಕಾದರೆ ಮನುವಾದಿಗಳಿಂದ ಪ್ರಜಾಪ್ರಭುತ್ವಕ್ಕೆ ಬಿಡುಗಡೆ ಸಿಗಬೇಕು ಎಂದು ವಕೀಲ ಹಾಗೂ ಅಂಬೇಡ್ಕರ್ ವಿಚಾರವಾದಿ ಶ್ರೀಧರ್ ಪ್ರಭು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಹುಜನ ವಿದ್ಯಾರ್ಥಿ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ದೇಶದಲ್ಲಿ ಮೂಲಭೂತ ಹಕ್ಕುಗಳನ್ನು ಉಳಿಸಿಕೊಂಡು ಹೋಗುವುದು ಅಗತ್ಯವಾಗಿದೆ ಎಂದರು. ಭಾರತೀಯರ ಜೀವನದ ಭಾಗವಾಗಿರುವ ಪ್ರಜಾಪ್ರಭುತ್ವಕ್ಕೆ ಮನುವಾದಿಗಳ ನಡೆಯಿಂದ ಅಪಾಯ ಬಂದಿದ್ದು, ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ದೇಶಪ್ರೇಮವೆಂದರೆ ನಾವು ಬೆಳೆಯುವ ಜೊತೆಗೆ ದೇಶದ ಸಂಪತ್ತಾದ ಇತರರ ಬೆಳೆವಣಿಗೆಯನ್ನೂ ಬಯಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿಯವರು ನೋಟು ಅಮಾನ್ಯ ಮಾಡುವ ಮೂಲಕ ದೇಶದ ಮೇಲೆ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಕಪ್ಪು ಹಣ ಮತ್ತು ಖೋಟಾ ನೋಟುಗಳನ್ನು ತಡೆಯಲು ಸಾಧ್ಯವಿಲ್ಲವೆಂದ ಅವರು, ವಿದೇಶದಲ್ಲಿರುವ ಕಪ್ಪುಹಣವನ್ನು ತರಲು ಮೊದಲು ಪ್ರಯತ್ನಿಸಲಿ ಎಂದರು.
ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಮುಖಂಡ ಎಂ.ಜಿ.ಶಿವಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಆಂದೋಲನದಿಂದ ಬಹುಜನ ವಿದ್ಯಾರ್ಥಿಗಳನ್ನು ಮೇಲ್ವರ್ಗದವರ ದಬ್ಬಾಳಿಕೆ, ಶೋಷಣೆ, ಅನ್ಯಾಯಗಳಿಂದ ಮುಕ್ತಗೊಳಿಸಲು ಜಾಗೃತಗೊಳಿಸಬೇಕಾಗಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ್ಷ ರಮೇಶ್ ಕುಟ್ಟಪ್ಪ ಮಾತನಾಡಿ, ಸಮಾಜದಲ್ಲಿ ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು, ಸಿಗುವ ಸ್ಥಾನ-ಮಾನ ಎಲ್ಲವೂ ನಮ್ಮಿಂದಲೇ ಹೊರತು ಬೇರೆಯವರು ನೀಡುವುದಲ್ಲವೆಂದರು. ಇರುವ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ನಾಯಕತ್ವದ ಗುಣವನ್ನು ಹೊಂದಬೇಕೆಂದು ಸಲಹೆ ನೀಡಿದರು.
ಡಾ.ಅಂಬೇಡ್ಕರ್ ವಿಚಾರವಾದಿ ಮೈಸೂರಿನ ನಾಗಸಿದ್ಧಾರ್ಥ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವು ಸಮುದಾಯಗಳು ನಮಗೂ, ಪ್ರಜಾಪ್ರಭುತ್ವಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮೌನವಾಗಿವೆ. ಇಂದಿನ ಸಮಾಜದಲ್ಲಿ ನಂಬಿಕೆಗಿಂತ ತಿಳುವಳಿಕೆಯ ಆಧಾರದ ಮೇಲೆ ಬದುಕು ಸಾಗಿಸಬೇಕಾಗಿದೆ. ಜಾತಿಯ ಹೆಸರಿನಲ್ಲಿ ಒಡೆದಿರುವ ಸಮಾಜವನ್ನು ಒಗ್ಗೂಡಿಸುವ ಕಾರ್ಯವಾಗಬೇಕಿದೆ. ಮನುವಾದಿಗಳ ವಿರುದ್ಧ ಧ್ವನಿ ಎತ್ತುವುದರ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ ಎಂದು ಕರೆ ನೀಡಿದರು.
ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ ಎಂಬ ವಿಚಾರದ ಕುರಿತು ಪ್ರಬಂಧ ಮಂಡನೆ ಮಾಡಿದ ಕುಮಾರಿ ಎಂ.ಎಸ್.ಗೌತಮಿ, ರಾಜ-ಮಹಾರಾಜರ ಕಾಲದಿಂದ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆವರೆಗಿನ ಸಮಾಜದ ಏಳು ಬೀಳುಗಳು, ಅದರಲ್ಲಿ ದಲಿತ ಸಮುದಾಯ ಯಾವ ರೀತಿ ತುಳಿತಕ್ಕೊಳಗಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದಲಿತ ಸಮುದಾಯ ದೂರವಾಗುತ್ತಿರಲು ಕಾರಣವೇನು ಮತ್ತು ಮನುವಾದಿಗಳಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಿ ದಲಿತ ಹಾಗೂ ಬಹುಜನ ಸಮಾಜವನ್ನು ವ್ಯವಸ್ಥಿತವಾಗಿ ಕಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು ಹಾಗೂ ದೇಶದ ಅಭಿವೃದ್ಧಿಯಲ್ಲಿ ಪ್ರಜಾಪ್ರಭುತ್ವದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ವಿಚಾರ ಸಂಕಿರಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕುಮಾರಿ ಕಾವ್ಯಾ, ಡಿ.4ರಿಂದ ಜ.26ರವರೆಗೆ ಬಹುಜನ ವಿದ್ಯಾರ್ಥಿ ಸಂಘ ರಾಜ್ಯಾದ್ಯಂತ ಜನಾಂದೋಲನ ಹಮ್ಮಿಕೊಂಡಿದೆ. ಆಂದೋಲನದಲ್ಲಿ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಪ್ರಜಾಪ್ರ ಭುತ್ವ ಉಳಿಸುವ ಬಗ್ಗೆ ಚರ್ಚೆ, ಚಿಂತನೆ ನಡೆಸಿ ಉತ್ತಮ ಸಮಾಜ ನಿರ್ಮಾಣ ಮಾಡುವುದರ ಜೊತೆಗೆ ಸಂಘದ ಧ್ಯೇಯ ಮತ್ತು ಕಾರ್ಯವೈಖರಿಯನ್ನು ತಿಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಬಹುಜನ ವಿದ್ಯಾರ್ಥಿ ಸಂಘದ ಮೈಸೂರಿನ ಮುಖಂಡರಾದ ಜಿ.ಕೆ.ಮೋಹನ್‌ಕುಮಾರ್, ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಬಿ.ಎ.ಶಂಸುದ್ಧೀನ್ ಹಾಗೂ ಬಹುಜನ ವಿದ್ಯಾರ್ಥಿ ಸಂಘದ ಸಂಯೋಜಕ ಸಿ.ಜೆ.ಮೋಹನ್ ಮೌರ್ಯ ಮಾತನಾಡಿದರು.
ಇದೇ ಸಂದರ್ಭ ಬಹುಜನ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಇತ್ತೀಚೆಗೆ ರಸಾಯನ ಶಾಸ್ತ್ರದ ಅಸಿಸ್ಟೆಂಟ್ ಫ್ರೊಫೆಸರ್ ಆಗಿ ಭಡ್ತಿ ಹೊಂದಿದ ಸಂಘಟನೆ ಯ ಸಂಯೋಜಕ ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ್.ಎಚ್.ಎಂ, ನ್ಯಾಯಾಂಗ ಇಲಾಖೆ ಶಿರಸ್ತೇದಾರ ಗೋವಿಂದರಾಜು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ರಾಜು, ಮಡಿಕೇರಿ ಬಿ.ಆರ್.ಪಿ ಜಯಮ್ಮ, ಬಿವಿಎಸ್ ನಗರಾಧ್ಯಕ್ಷ ಅರ್ಜುನ್ ದೇವ್ ಉಪಸ್ಥಿತರಿದ್ದರು.







