ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ರನ್ನರ್ಸ್-ಅಪ್
ವೇಲ್ಶ್ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿ

ಕಾರ್ಡಿಫ್, ಡಿ.4: ವೇಲ್ಶ್ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು.
ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಭಾರತದ ಜೋಡಿ ಅಶ್ವಿನಿ-ಸಿಕ್ಕಿ ರಶ್ಯದ ಅಗ್ರ ಶ್ರೇಯಾಂಕದ ಒಲ್ಗಾ ಮೊರೊರೊವಾ ಹಾಗೂ ಅನಸ್ಟೇಸಿಯ ಚೆರ್ವಿಕೊವಾ ವಿರುದ್ಧ ಕೇವಲ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-16, 21-11 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಇದಕ್ಕೆ ಮೊದಲು ನಡೆದ ಸೆಮಿ ಫೈನಲ್‌ನಲ್ಲಿ ಅಶ್ವಿನಿ ಹಾಗೂ ಸಿಕ್ಕಿ ಇಂಗ್ಲೆಂಡ್‌ನ ಲೌರೆನ್ ಸ್ಮಿತ್ ಹಾಗೂ ಸೋಫಿ ಬ್ರೌನ್‌ರನ್ನು 21-16, 21-18 ಸೆಟ್‌ಗಳ ಅಂತರದಿಂದ ಮಣಿಸಿದರು. ಅಶ್ವಿನಿ ಹಾಗೂ ಸಿಕ್ಕಿ ಕೇವಲ 39 ನಿಮಿಷಗಳಲ್ಲಿ ಇಂಗ್ಲೆಂಡ್ ಡಬಲ್ಸ್ ತಂಡವನ್ನು ಸೋಲಿಸಿತ್ತು.
ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಜಿಶ್ನು ಸನಿಯಲ್ ಹಾಗೂ ಶಿವಂ ಶರ್ಮ ಚೈನೀಸ್ ತೈಪೆಯ ಲಿಯಾವೊ ಕುವಾನ್ ಹಾವೊ ಹಾಗೂ ಲೂ ಚಿಯಾ ಪಿನ್ ವಿರುದ್ಧ 21-17, 21-17 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.





