ಐಪಿಟಿಎಲ್: ಇಂಡಿಯನ್ ಏಸಸ್‌ಗೆ ಮೊದಲ ಸೋಲು

ಟೋಕಿಯೊ, ಡಿ. 4: ಇಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರಿಮಿಯರ್ ಟೆನಿಸ್ ಲೀಗ್(ಐಪಿಟಿಎಲ್) ಟೂರ್ನಿಯ ಪಂದ್ಯದಲ್ಲಿ ಇಂದು ಇಂಡಿಯನ್ ಏಸಸ್ ತಂಡ ಸಿಂಗಾಪುರ ಸ್ಲಾಮರ್ಸ್ 20-30 ಅಂತರದಲ್ಲಿ ಸೋಲುವುದರೊಂದಿಗೆ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.
ಲೆಜೆಂಡ್ ಸಿಂಗಲ್ಸ್‌ನಲ್ಲಿ ಮಾರ್ಕ್ ಫಿಲಿಪೌಸಿಸ್ ಅವರು ಥಾಮಸ್ ಜಾನ್ಸನ್ ವಿರುದ್ಧ 3-6 ಅಂತರದಲ್ಲಿ ಸೋಲುವುದರೊಂದಿಗೆ ಏಸಸ್ ಹಿನ್ನಡೆ ಅನುಭವಿಸಿತು.
ಕೃಸ್ಟನ್ ಫಿಲ್ಪೆಕೆನ್ಸ್ ಶನಿವಾರ ಪಂದ್ಯದಲ್ಲಿ ಜಯ ಗಳಿಸಿದ್ದರು. ಆದರೆ ಇಂದು ಅವರಿಗೆ ತಂಡದ ಗೆಲುವಿಗೆ ನೆರವಾಗಲು ಸಾಧ್ಯವಾಗಲಿಲ್ಲ. ಅವರು ಸ್ವಿಸ್ ಗ್ರೇಟ್ ಮಾರ್ಟಿನಾ ಹಿಂಗಿಸ್‌ಗೆ 4-6 ಅಂತರದಲ್ಲಿ ಶರಣಾದರು.
ಹಿಂಗಿಸ್ ಎರಡನೆ ಬಾರಿ ಪಾಬ್ಲೊ ಕ್ಯುವೆಸ್ ಜೊತೆ ಕಣಕ್ಕಿಳಿದು ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಝಾ ಮತ್ತು ರೋಹನ್ ಬೋಪಣ್ಣ ಅವರಿಗೆ 6-4 ಅಂತರದಲ್ಲಿ ಸೋಲುಣಿಸಿದರು. ಹಿಂಗಿಸ್ ಅವರು ಸಾನಿಯಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ಬಳಿಕ ಮೊದಲ ಪಂದ್ಯದಲ್ಲಿ ಸಾನಿಯಾರನ್ನು ಎದುರಿಸಿದ್ದರು.
ಸ್ಪೇನ್‌ನ ಫೆಲಿಸಿಯಾನಿ ಲೊಪೆಝ್ ಅವರು ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ವಿರುದ್ಧ 2-6 ಅಂತರದಲ್ಲಿ ಸೋಲು ಅನುಭವಿಸಿದರು. ಬಳಿಕ ಲೊಪೆಝ್ ಮತ್ತು ಬೋಪಣ್ಣ ಅವರು ಪುರುಷರ ಡಬಲ್ಸ್‌ನಲ್ಲಿ ಜೊತೆಯಾಗಿ ಡೇನಿಯೆಲ್ ನೆಸ್ಟರ್ ಮತ್ತು ಕ್ಯುವೆಸ್ ವಿರುದ್ಧ 6-6 ಟೈ ಸಾಧಿಸಿದರು. ಇಂಡಿಯನ್ ಏಸಸ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ಜಪಾನ್ ವಾರಿಯರ್ಸ್ ಮತ್ತು ಯುಎಇ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತ್ತು. 7 ಅಂಕಗಳೊಂದಿಗೆ ಏಸಸ್ ಮೊದಲ ಸ್ಥಾನ ಪಡೆದಿದೆ. ಅಷ್ಟೇ ಅಂಕಗಳನ್ನು ಪಡೆದಿರುವ ರಾಯಲ್ಸ್ ಎರಡನೆ ಸ್ಥಾನದಲ್ಲಿದೆ.
ಅಂಕಪಟ್ಟಿಯಲ್ಲಿ ಪ್ರಥಮ ಮತ್ತು ಎರಡನೆ ಸ್ಥಾನ ಪಡೆದ ತಂಡಗಳು ಡಿಸೆಂಬರ್ 11ರಂದು ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ.
,,,,,,,,,,,,,





