ರೋಹಿಂಗ್ಯಾ ನರಮೇಧದ ವಿರುದ್ಧ ಮಲೇಶ್ಯ ಆಕ್ರೋಶ
ಸೂ ಕಿ ಮಧ್ಯ ಪ್ರವೇಶಕ್ಕೆ ಅಧ್ಯಕ್ಷ ನಜೀಬ್ ಆಗ್ರಹ

ಕೌಲಾಲಂಪುರ,ಡಿ.4: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ಭೀಕರ ನರಮೇಧವನ್ನು ತಡೆಗಟ್ಟಲುಆಂಗ್ ಸಾನ್ ಸೂ ಕಿ ಮಧ್ಯಪ್ರವೇಶಿಸಬೇಕೆಂದು ಮಲೇಶ್ಯದ ಪ್ರಧಾನಿ ನಜೀಬ್ ರಝಾಕ್ ಆಗ್ರಹಿಸಿದ್ದಾರೆ. ರೋಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡವನ್ನು ನಿಲ್ಲಿಸುವಲ್ಲಿ ನೊಬೆಲ್ ಶಾಂತಿ ಪುರಸ್ಕೃತೆಯಾದ ಆಂಗ್ ಸಾನ್ ಸೂಕಿ ನಿಷ್ಕ್ರಿಯತೆಯನ್ನು ಪ್ರದರ್ಶಿಸುತ್ತಿದ್ದಾರೆಂದು ಅವರು ಟೀಕಿಸಿದ್ದಾರೆ.
ಕೌಲಾಲಂಪುರದಲ್ಲಿ ಬೃಹತ್ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ದಮನವನ್ನು ಮ್ಯಾನ್ಮಾರ್ ಸರಕಾರ ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಿರಂತರ ಅತ್ಯಾಚಾರ, ನರಮೇಧ ಹಾಗೂ ದೌರ್ಜನ್ಯಗಳಿಂದಾಗಿ ಪ್ರತಿ ದಿನವೂ ಸಾವಿರಾರು ರೋಹಿಂಗ್ಯಾ ಮುಸ್ಲಿಮರು ಮನೆಮಾರು ತೊರೆದು ಪಲಾಯನಗೈಯುತ್ತಿದ್ದಾರೆಂದು ನಜೀಬ್ ನೋವು ವ್ಯಕ್ತಪಡಿಸಿದರು.
‘‘ ಇನ್ನು ಇದು ಸಾಕು... ಎಂದು ನಾವು ಆಂಗ್‌ಸಾನ್ ಸೂಕಿ ಅವರಿಗೆ ಹೇಳಲು ಬಯಸುತ್ತೇವೆ. ನಾವು ಮುಸ್ಲಿಮರನ್ನು ಹಾಗೂ ಇಸ್ಲಾಮನ್ನು ರಕ್ಷಿಸಬೇಕಾಗಿದೆ ಎಂದು ನಜೀಬ್, ಬೆಂಬಲಿಗರ ಘೋಷಣೆಗಳ ನಡುವೆ ಹೇಳಿದರು.
ರೋಹಿಂಗ್ಯಾಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಇಸ್ಲಾಂ ಸಹಕಾರ ಸಂಘಟನೆ ಕಾರ್ಯಪ್ರವೃತ್ತವಾಗಬೇಕೆಂದು ಅವರು ಆಗ್ರಹಿಸಿದರು.
ರೋಹಿಂಗ್ಯಾಗಳ ಹತ್ಯಾಕಾಂಡವನ್ನು ನಿಲ್ಲಿಸಲು ವಿಶ್ವಸಂಸ್ಥೆ ಏನನ್ನಾದರೂ ಮಾಡಬೇಕೆಂದು ಅವರು ಕರೆ ನೀಡಿದರು. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರು ಜನಾಂಗೀಯ ಹತ್ಯೆಯನ್ನು ಜಗತ್ತು ಮೂಕಪ್ರೇಕ್ಷಕನಾಗಿ ವೀಕ್ಷಿಸಬಾರದೆಂದು ಅವರು ಹೇಳಿದರು.
ಮ್ಯಾನ್ಮಾರ್‌ನ ಉತ್ತರದಲ್ಲಿರುವ ರಾಖೈನ್ ರಾಜ್ಯದಲ್ಲಿ ಸೇನೆಯ ದಮನ ಕಾರ್ಯಾಚರಣೆಗೆ ಹೆದರಿ ಇತ್ತೀಚಿನ ವಾರಗಳಲ್ಲಿ 10 ಸಾವಿರಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ.
ಬಾಂಗ್ಲಾದಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯಾಗಳು ಭದ್ರತಾಪಡೆಗಳು ನಡೆಸುತ್ತಿರುವ ಸಾಮೂಹಿಕ ಅತ್ಯಾಚಾರ, ದೌರ್ಜನ್ಯ ಹಾಗೂ ಹತ್ಯಾಕಾಂಡದ ಬೀಭತ್ಸ ಕತೆಗಳನ್ನು ಸುದ್ದಿಗಾರರ ಮುಂದೆ ಬಹಿರಂಗಪಡಿಸಿದ್ದಾರೆ. ಆದರೆ ಮ್ಯಾನ್ಮಾರ್ ಸೇನೆಯು ರೋಹಿಂಗ್ಯಾಗಳ ಮೇಲೆ ಯಾವುದೇ ದೌರ್ಜನ್ಯ ನಡೆದಿರುವುದನ್ನು ತಳ್ಳಿಹಾಕಿದೆ. ಈ ಪ್ರದೇಶಕ್ಕೆ ವಿದೇಶಿ ಪತ್ರಕರ್ತರು ಹಾಗೂ ಸ್ವತಂತ್ರ ತನಿಖಾಧಿಕಾರಿಗ ಪ್ರವೇಶವನ್ನು ಕೂಡಾ ಅದು ನಿರಾಕರಿಸಿದೆ.







