ರೈತನ ಕೈಯಲ್ಲಿ 37 ಪಾಸ್‌ಬುಕ್, 44 ಎಟಿಎಂ ಕಾರ್ಡ್ ಗಳು !

ಗುವಾಹಟಿ, ಡಿ. 5: ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಬಿಳಿ ಮಾಡಿದ ಗುಜರಾತ್‌ನ ಉದ್ಯಮಿ ಇಷ್ಟರಲ್ಲೇ ಕುಪ್ರಸಿದ್ಧಿ ಗಳಿಸಿದ್ದರೆ, ಅಸ್ಸಾಂನ ರೈತನೊಬ್ಬ 37 ಬ್ಯಾಂಕ್ ಪಾಸ್‌ಬುಕ್ ಮತ್ತು 44 ಎಟಿಎಂ ಕಾರ್ಡುಗಳನ್ನು ಹೊಂದಿ ಕುತೂಹಲ ಕೆರಳಿಸಿದ್ದಾನೆ. ಅಸ್ಸಾಂನ ಜಿಂಟು ಬೊರಾ ಇಂತಹ ‘ಸಾಹಸಿ’ ರೈತನಾಗಿದ್ದಾನೆ. ಮಧುಪೂರ್ ಗ್ರಾಮದ ನಿವಾಸಿ ಬೊರಾರ ಮನೆಗೆ ದಾಳಿ ನಡೆಸಿದ ಅಸ್ಸಾಂ ಪೊಲೀಸರಿಗೆ ಇಷ್ಟು ಹಣ ವ್ಯವಹಾರ ನಡೆಸಿದ ದಾಖಲೆಗಳು ದೊರಕಿವೆ ಎಂದು ವರದಿಯಾಗಿದೆ.
ಎಟಿಎಂ ಕಾರ್ಡ್,ಪಾಸ್‌ಬುಕ್ ಅಲ್ಲದೆ 200 ಖಾಲಿ ಚೆಕ್‌ಗಳು, ಖಾಲಿ ಠಸೆ ಪೇಪರ್, ಲ್ಯಾಪ್‌ಟಾಪ್, 22,380ರೂಪಾಯಿ ನಗದು ಪೊಲೀಸರಿಗೆ ಸಿಕ್ಕಿದೆ. ಗ್ರಾಮಸ್ಥರಿಗೆ ನೀಡಿದ ಸಾಲಕ್ಕೆ ದಾಖಲೆಯಾಗಿ ಪಾಸ್‌ಬುಕ್, ಎಟಿಎಂ ಕಾರ್ಡ್‌ನ್ನು ಪಡೆದಿದ್ದೇನೆ ಎಂದು ರೈತ ಬೊರಾ ಪೊಲೀಸರಿಗೆ ತಿಳಿಸಿದ್ದಾರೆ.
ಆದರೆ ಕಪ್ಪುಹಣದ ಸಾಧ್ಯತೆಯನ್ನು ಪೊಲೀಸರು ನಿರಾಕರಿಸಿಲ್ಲ ಆದರೆ ಬೊರಾ ಕೈಯಿಂದ ಹಳೆ ನೋಟುಗಳು ಪೊಲೀಸರಿಗೆ ಸಿಕ್ಕಿಲ್ಲ. ಆದ್ದರಿಂದ ಬೊರಾಗೆ ಸಣ್ಣಪ್ರಮಾಣದ ಶಿಕ್ಷೆ ಆಗಬಹುದಷ್ಟೇ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈತನ ಖಾತೆಯಲ್ಲಿ ಎಷ್ಟು ಹಣವಿದೆ ಮತ್ತು ಅದು ಯಾರ ಹಣವೆಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆಂದು ವರದಿ ತಿಳಿಸಿದೆ.





