ಪುತ್ತೂರು ಶಾಸಕರ ಪಕ್ಷ ನಿಷ್ಟೆ ಬಗ್ಗೆ ಕಾಂಗ್ರೆಸಿಗರಿಗೇ ಅನುಮಾನವಿದೆ: ಜೆಡಿಎಸ್ ಆರೋಪ
ಪುತ್ತೂರು, ಡಿ.5: ಪುತ್ತೂರು ಶಾಸಕಿಯವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರು ಹೇಳಿಕೆ ನೀಡಿರುವುದನ್ನು ಸಮರ್ಥಿಸಿಕೊಂಡ ಯುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಕಲ್ಲೇಗ ಮತ್ತು ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಐ.ಸಿ. ಕೈಲಾಸ್ ಅವರು ಶಾಸಕಿ ಅವರ ಪಕ್ಷ ನಿಷ್ಟೆ ಬಗ್ಗೆ ಕಾಂಗ್ರೆಸ್ಗರಿಗೆ ಅನುಮಾನವಿದೆ ಎಂಬುದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಪತ್ರಿಕಾ ಹೇಳಿಕೆಯಿಂದ ಸಾಬೀತಾಗಿದೆ ಎಂದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುತ್ತೂರು ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಜೆಡಿಎಸ್ ಜಿಲ್ಲಾಧ್ಯಕ್ಷರ ವಿರುದ್ದ ಪತ್ರಿಕಾ ಪ್ರಕಟಣೆ ನೀಡಿ ತಮ್ಮ ಅನುಮಾನವನ್ನು ಬಹಿರಂಗಪಡಿಸಿದ್ದಾರೆ. ಶಾಸಕಿಯವರು ಬಿಜೆಪಿಯನ್ನು ಓಲೈಕೆ ಮಾಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಅಧ್ಯಕ್ಷತೆಗೆ ಬಿಜೆಪಿಯವರನ್ನು ನೇಮಕ ಮಾಡುತ್ತಿದ್ದಾರೆ. ಇದರಿಂದಾಗಿ ಪಕ್ಷದ ನಿಷ್ಠಾವಂತೆ ಕಾರ್ಯಕರ್ತರಿಗೆ ನೋವಾಗುತ್ತಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೇ ಆರೋಪಿಸುತ್ತಿದ್ದಾರೆ. ಅದನ್ನು ಜೆಡಿಎಸ್ ಜಿಲ್ಲಾಧ್ಯಕ್ಷರು ಉಲ್ಲೇಖಿಸಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಅವರ ಪಕ್ಷದವರೇ ಅವರನ್ನು ಸೋಲಿಸುವ ಕೆಲಸ ಮಾಡಲಿದ್ದಾರೆ. ಕಾಂಗ್ರೆಸನ್ನು ಸೋಲಿಸಲು ಜೆಡಿಎಸ್ ಬೇಕಾಗಿಲ್ಲ ಎಂದರು.
ನಗರಸಭೆಯ ವಿರುದ್ದ ಪ್ರತಿಭಟನೆ
ಪುತ್ತೂರು ನಗರಸಭೆಯಲ್ಲಿ ಅರಾಜಕತೆಯಿದೆ. ಖಾತೆ ಬದಲಾವಣೆ, ಪರವಾನಿಗೆ ಬಗ್ಗೆ ಸಾರ್ವಜನಿಕರಿಗೆ ಸಮಸ್ಯೆಗಳಾಗುತ್ತಿದೆ. ನಗರಸಭೆಯಲ್ಲಿ ಆಡಳಿತ ಪಕ್ಷ ಯಾವುದು ವಿರೋಧ ಪಕ್ಷ ಯಾವುದು ಎಂಬುದು ಗೊತ್ತಾಗುತ್ತಿಲ್ಲ ಇವೆಲ್ಲದರ ವಿರುದ್ದ ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದ ಅವರು ವಾರದ ಸಂತೆಯ ಗೊಂದಲದಿಂದಾಗಿ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಸಮಸ್ಯೆಗಳಾಗಿದೆ. ವಾರದ ಸಂತೆಯನ್ನು ಎಡಿಬಿ ವತಿಯಿಂದ ನಿರ್ಮಿಸಲಾಗಿರುವ ಸಂತೆ ಕಟ್ಟಡದಲ್ಲಿಯೇ ಮುಂದುವರಿಸುವ ಕುರಿತು ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕ್ಷೇತ್ರ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್, ನಗರ ಜೆಡಿಎಸ್ ಅಧ್ಯಕ್ಷ ಅಶ್ವಿನ್ ರೈ, ಮುಖಂಡರಾದ ಮೌರೀಸ್ ಗೋನ್ಸಾಲ್ವಿಸ್, ಚಂದ್ರ, ಆಶ್ಲೇಷ್ ಭಟ್ ಉಪಸ್ಥಿತರಿದ್ದರು.







