ಉಸ್ತಾದ್ ಬಿಸ್ಮಿಲ್ಲಾ ಖಾನ್‌ರ ಶಹನಾಯಿಗಳ ಕಳವು

ವಾರಣಾಸಿ,ಡಿ.5: ಖ್ಯಾತ ಶಹನಾಯಿ ವಾದಕ ದಿ.ಬಿಸ್ಮಿಲ್ಲಾ ಖಾನ್ ಅವರ ಐದು ಶಹನಾಯಿಗಳನ್ನು ಕಳ್ಳರು ಎಗರಿಸಿದ್ದಾರೆ. ಈ ಪೈಕಿ ನಾಲ್ಕು ಬೆಳ್ಳಿಯಿಂದ ಮಾಡಲ್ಪಟ್ಟಿವೆ. ಖಾನ್ ಅವರ ಪುತ್ರ ಕಾಝಿಂ ಹುಸೇನ್ ಅವರ ಇಲ್ಲಿಯ ನಿವಾಸದಿಂದ ಈ ಶಹನಾಯಿ ಗಳು ಕಳವಾಗಿವೆ.
ದಾಲ್‌ಮಂಡಿ ಪ್ರದೇಶದ ನಮ್ಮ ನೂತನ ನಿವಾಸದಿಂದ ಈ ಶಹನಾಯಿಗಳು ನಾಪತ್ತೆಯಾಗಿದ್ದು, ಈ ಬಗ್ಗೆ ರವಿವಾರ ಸಂಜೆ ಪೊಲೀಸ್ ದೂರು ಸಲ್ಲಿಸಿದ್ದೇವೆ. ನಾಲ್ಕು ಬೆಳ್ಳಿಯ ಶಹನಾಯಿಗಳು, ಕಟ್ಟಿಗೆ ಮತ್ತು ಬೆಳ್ಳಿಯಿಂದ ಮಾಡಿದ ಒಂದು ಶಹನಾಯಿ, ಇನಾಯತ್ ಖಾನ್ ಪ್ರಶಸ್ತಿ ಮತ್ತು ಬಂಗಾರದ ಬಳೆಗಳು ಕಳ್ಳತನವಾಗಿರುವ ಸೊತ್ತುಗಳಲ್ಲಿ ಸೇರಿವೆ ಎಂದು ಖಾನ್ ಅವರ ಮೊಮ್ಮಗ ರಝಿ ಹಸನ್ ಸುದ್ದಿಸಂಸ್ಥೆಗೆ ತಿಳಿಸಿದರು.
ಕುಟುಂಬವು ಇತ್ತೀಚಿಗಷ್ಟೇ ದಾಲ್‌ಮಂಡಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದು, ಸರಾಯ್ ಹರ್ಹಾದಲ್ಲಿನ ಪೂರ್ವಜರ ಮನೆಗೆ ತೆರಳಿದ್ದಾಗ ಈ ಕಳ್ಳತನ ನಡೆದಿದೆ.
ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಎಸ್‌ಪಿ ನಿತಿನ್ ತಿವಾರಿ ತಿಳಸಿದರು.
ಕಳ್ಳತನವಾಗಿರುವ ಶಹನಾಯಿಗಳನ್ನು ಖಾನ್ ತುಂಬ ಪ್ರೀತಿಸುತ್ತಿದ್ದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್, ಕಪಿಲ್ ಸಿಬಲ್ ಮತ್ತು ಲಾಲುಪ್ರಸಾದ್ ಯಾದವ ಅವರು ಈ ಶಹನಾಯಿಗಳನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಅವುಗಳ ಪೈಕಿ ಒಂದು ಖಾನ್ ಅವರ ಪಾಲಿಗೆ ಅತ್ಯಂತ ವೌಲ್ಯಯುತವಾಗಿತ್ತು. ಪ್ರತಿವರ್ಷ ಮೊಹರಂ ಮೆರವಣಿಗೆಯಲ್ಲಿ ಆ ಶಹನಾಯಿಯನ್ನೇ ಅವರು ನುಡಿಸುತ್ತಿದ್ದರು. ಅವರು ತಾಲೀಮಿಗಾಗಿ ಬಳಸುತ್ತಿದ್ದ ಮರದ ಶಹನಾಯಿಯೊಂದನ್ನು ಬಿಟ್ಟರೆ ಅವರ ಯಾವುದೇ ಶಹನಾಯಿ ಈಗ ನಮ್ಮ ಬಳಿ ಉಳಿದಿಲ್ಲ ಎಂದು ಹಸನ್ ತಿಳಿಸಿದರು.
ಖಾನ್ ಅವರ ಸ್ಮರಣಿಕೆಗಳನ್ನು ಇಡಲು ಮ್ಯೂಝಿಯಂ ಸ್ಥಾಪನೆಗಾಗಿ ಕುಟುಂಬವು 2006ರಿಂದಲೂ ಸರಕಾರವನ್ನು ಒತ್ತಾಯಿಸುತ್ತಿದೆ.
ಕುಟುಂಬದ ಬಳಿ ಈಗ ಖಾನ್ ಅವರ ಭಾರತ ರತ್ನ ಪದಕ,ಪದ್ಮಶ್ರೀ ಮತ್ತು ಇತರ ಕೆಲವು ಪದಕಗಳಷ್ಟೇ ಉಳಿದುಕೊಂಡಿವೆ ಎಂದು ಹಸನ್ ವಿಷಾದದಿಂದ ಹೇಳಿದರು







