ಹೊಸ ನಾಯಕನ ಆಯ್ಕೆ ಮಾಡಿದ ಎಐಎಡಿಎಂಕೆ

ಚೆನ್ನೈ, ಡಿ. 5 : ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಅವರ ಪಕ್ಷ ಎಐಎಡಿಎಂಕೆ ತಮ್ಮ ಹೊಸ ನಾಯಕನ ಆಯ್ಕೆಗೆ ಸಜ್ಜಾಗಿದೆ.
ನ್ಯೂಸ್ 18 ವರದಿ ಪ್ರಕಾರ, ಎಐಎಡಿಎಂಕೆ ಶಾಸಕರುಇಂದು ಸಂಜೆ ಸಭೆ ಸೇರಿ ಸಚಿವ ಓ . ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ನೂತನ ನಾಯಕನಾಗಿ ಆಯ್ಕೆ ಮಾಡಲಿದ್ದಾರೆ ಎಂದು ವರದಿ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಶಾಸಕರು ತಮ್ಮ ಬೆಂಬಲ ಸೂಚಿಸಿ ಪತ್ರಕ್ಕೆ ಸಹಿ ಎಂದೂ ಹೇಳಲಾಗಿದೆ.
ಪನ್ನೀರ್ ಸೆಲ್ವಂ ಜಯಲಲಿತಾ ಅವರ ಅತ್ಯಂತ ನಂಬಿಕಸ್ಥ ನಾಯಕನಾಗಿದ್ದು ಈ ಹಿಂದೆ ಎರಡು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
2001 ರಲ್ಲಿ ಜಯಲಲಿತಾಗೆ ಯಾವುದೇ ಸರಕಾರಿ ಹುದ್ದೆ ವಹಿಸದಂತೆ ನಿರ್ಬಂಧ ಹೇರಿದ್ದಾಗ ಹಾಗು 2011 ರಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಜಯಲಲಿತಾಗೆ ಶಿಕ್ಷೆಯಾದಾಗ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು. ಆದರೆ ' ಅಮ್ಮ' ನ ಮೇಲಿನ ಕಾನೂನು ಬಿಗಿ ಸಡಿಲಗೊಂಡ ಕೂಡಲೇ ಶಿಸ್ತಿನ ಸಿಪಾಯಿಯಂತೆ ಅವರಿಗೆ ತಮ್ಮ ಹುದ್ದೆ ಬಿಟ್ಟುಕೊಟ್ಟಿದ್ದರು.







