ಜಯಲಲಿತಾರನ್ನು ಬದುಕಿಸಿಕೊಳ್ಳುವುದಕ್ಕಾಗಿ ಎಲ್ಲಾ ರೀತಿಯ ಯತ್ನ: ಅಪೋಲೋ ಆಸ್ಪತ್ರೆ

ಚೆನ್ನೈ,ಡಿ.5: ಕಳೆದ 74 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯ ಮಂತ್ರಿ ಜಯ ಲಲಿತಾ ಇಂದು ಸಂಜೆ ನಿಧನರಾದರೆಂದು ಹೇಳಿಕೆ ನೀಡಿದ್ದ ಆಪೋಲೋ ಆಸ್ಪತ್ರೆ ಬಳಿಕ ಅವರು ನಿಧನರಾಗಿಲ್ಲ ಚಿಕಿತ್ಸೆ ಮುಂದುವರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಯಲಲಿತಾ ಅವರು ನಿಧನರಾಗಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಅಪೋಲೋ ಆಸ್ಪತ್ರೆ ಸ್ಪಷ್ಟವಾಗಿ ನಿರಾಕರಿಸಿದೆ.ತಮಿಳು ಹಾಗೂ ಕನ್ನಡದ ಕೆಲವು ಸುದ್ದಿ ವಾಹಿನಿಗಳು ಜಯಲಲಿತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ನಿಧನರಾದರು ಎಂದು ವರದಿ ಮಾಡಿದ್ದವು.
ಈ ಬಗ್ಗೆ ಟ್ವೀಟ್ ಮಾಡಿರುವ ಅಪೋಲೋ ಆಸ್ಪತ್ರೆ,ಜಯಲಲಿತಾ ಅವರನ್ನು ಬದುಕಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಯುತ್ತಿದೆ . ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಕೃತಕ ಉಸಿರಾಟ ಅಳವಡಿಸಲಾಗಿದೆ. ಎಂದು ಹೇಳಿಕೆ ನೀಡಿದೆ
ತೀವ್ರ ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿರುವ 68 ವರ್ಷದ ಜಯಲಲಿತಾ ಅವರು ಕಳೆದ ಸೆಪ್ಟೆಂಬರ್ 22ರಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಯಲಲಿತಾ ನಿಧಾನವಾಗಿ ಚೇತರಿಸಿಕೊಂಡು, ಆಸ್ಪತ್ರೆಯಿಂದ ಮನೆಗೆ ತೆರಳಲು ಸಿದ್ದತೆ ನಡೆಯುತ್ತಿದ್ದಂತೆ ಅವರಿಗೆ ರವಿವಾರ ಸಂಜೆ ಹೃದಯಾಘಾತವಾಗಿತ್ತು. ಬಳಿಕ ಅವರನ್ನು ಎಂಐಸಿಯುಗೆ ದಾಖಲಿಸಲಾಗಿತ್ತು.
ಇಂದು ಬೆಳಗ್ಗಿನಿಂದ ಆಸ್ಪತ್ರೆಯ ಎಂಐಸಿಯುನಲ್ಲಿ ಇಸಿಎಂಒ ಉಪಕರಣದ ನೆರವಿನಿಂದ ಚಿಕಿತ್ಸೆ ಚಿಕಿತ್ಸೆ ನೀಡಲಾಗಿದ್ದರೂ,ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದೆ ಕೋಮಾದಲ್ಲಿದ್ದಾರೆ.





