ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಡೆಸ್ನಾನಕ್ಕೆ ಬದಲು ಎಡೆಸ್ನಾನ

ಉಡುಪಿ, ಡಿ.5: ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಸೋಮವಾರ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿಯ ಆವರಣದಲ್ಲಿ ಪ್ರಥಮ ಬಾರಿಗೆ ಭಕ್ತಾಧಿಗಳಿಗೆ ಮಡೆಸ್ನಾನಕ್ಕೆ ಬದಲು ಎಡೆಸ್ನಾನ ಸೇವೆಗೆ ಅವಕಾಶ ಕಲ್ಪಿಸ ಲಾಯಿತು.
ಪರ್ಯಾಯ ಸಂದರ್ಭದಲ್ಲಿ ಮಾಡಿರುವ ಘೋಷಣೆಯಂತೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮಡೆಸ್ನಾನಕ್ಕೆ ಸಂಬಂಧಿಸಿದ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಈ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಪರ್ಯಾಯ ಸ್ವಾಮೀಜಿ ಸುಬ್ರಹ್ಮಣ್ಯ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯವನ್ನು ಅರ್ಪಿಸಿದರು. ನಂತರ ದೇವಸ್ಥಾನದ ಸುತ್ತಲೂ ಇರಿಸಲಾಗಿದ್ದ ಬಾಳೆ ಎಲೆಯಲ್ಲಿ ಬಡಿಸಿದ ಪ್ರಸಾದದ ಮೇಲೆ ಭಕ್ತರು ಉರುಳು ಸೇವೆ ನಡೆಸಿದರು. ಈ ಬಾರಿ ಕೇವಲ ಏಳು ಮಂದಿ ಮಾತ್ರ ಎಡೆಸ್ನಾನ ಮಾಡಿದರು. ಎಡೆಸ್ನಾನದ ಬಳಿಕ ಆ ಪ್ರಸಾದವನ್ನು ಗೋವುಗಳಿಗೆ ನೀಡಲಾಯಿತು.
ಷಷ್ಠಿಯ ಪ್ರಯುಕ್ತ ರಥಬೀದಿಯಲ್ಲಿ ಉಭಯ ಸ್ವಾಮೀಜಿ ಯರ ಉಪಸ್ಥಿತಿಯಲ್ಲಿ ಸುಬ್ರಹ್ಮಣ್ಯ ದೇವರ ರಥೋತ್ಸವ ನಡೆಯಿತು.
‘ನಾನು ಯಾವುದೇ ಹರಕೆ ಹೊತ್ತು ಎಡೆಸ್ನಾನ ಮಾಡಿಲ್ಲ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿ ಹಲವು ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ. ಕಣ್ಣಿಗೆ ಕಾಣುವ ನಾಗ ದೇವರ ಮೇಲೆ ನನಗೆ ಅಪಾರ ಭಕ್ತಿ’ ಎಂದು ಮಠದ ಭಕ್ತ ಗುರುರಾಜ ಭಟ್ ಪೆರ್ಣಂಕಿಲ ತಿಳಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದಾಗ ಹೊತ್ತ ಹರಕೆಯನ್ನು ತೀರಿಸಲು ಕಳೆದ ಎಂಟು ವರ್ಷಗಳಿಂದ ಮಡೆಸ್ನಾನ ಮಾಡುತ್ತಿದ್ದೇನೆ. ಈಗ ನನ್ನ ಆರೋಗ್ಯ ಸುಧಾರಣೆಯಾಗಿದೆ. ಪ್ರತಿ ವರ್ಷ ನಾನು ಇದನ್ನು ಮಾಡುತ್ತಿದ್ದೇನೆ. ಈ ಬಾರಿ ಸ್ವಾಮೀಜಿ ಮಡೆಸ್ನಾನದ ಬದಲು ಜಾರಿಗೆ ತಂದಿರುವ ಎಡೆಸ್ನಾನವನ್ನು ನಾನು ಗೌರವಿಸುತ್ತೇನೆ ಎನ್ನುತ್ತಾರೆ ಮಠದ ಸಿಬ್ಬಂದಿ ಸುಬ್ರಹ್ಮಣ್ಯ ಆಚಾರ್ಯ.
ಪೇಜಾವರ ಮಠದ ಅಧೀನದ ಮುಚ್ಲುಗೋಡು ಶ್ರೀಸುಬ್ರಹ್ಮಣ್ಯ ದೇವ ಸ್ಥಾನದಲ್ಲಿ ಕಳೆದ ಮೂರು ವರ್ಷಗಳಿಂದ ಎಡೆಸ್ನಾನ ಪದ್ದತಿ ಜಾರಿಯಲ್ಲಿದ್ದು, ಈ ಬಾರಿಯು ಭಕ್ತರು ಬಾಳೆ ಎಲೆಯಲ್ಲಿ ಬಡಿಸಿದ ನೈವೇದ್ಯದ ಮೇಲೆ ಉರುಳುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.
ವಿವಾದಕ್ಕೆ ಅವಕಾಶ ಬೇಡ:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀ, ಮಡ್ನೆಸ್ನಾನಕ್ಕೆ ವಿರೋಧ ಇರುವುದರಿಂದ ಯಾವುದೇ ಚರ್ಚೆ ಹಾಗೂ ವಿವಾದ ಆಗದಂತೆ ಈ ಬಾರಿ ದೇವರಿಗೆ ಸಮರ್ಪಿಸಿದ ನೈವೇದ್ಯದ ಮೇಲೆ ಭಕ್ತರು ಉರುಳುವ ಎಡೆಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪ್ರಾಚೀನ ಕಾಲದ ಸಂಪ್ರದಾಯವನ್ನು ಉಳಿಸಿದಂತಾಗುತ್ತದೆ. ಬ್ರಾಹ್ಮಣ ಬ್ರಾಹ್ಮಣೇತರ ಎಂಬ ಜಾತಿ ವಿವಾದಕ್ಕೆ ಅವಕಾಶ ಬೇಡ ಎಂಬ ಕಾರಣಕ್ಕೆ ಮಡೆಯ ಬದಲು ಎಡೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅನ್ನವನ್ನು ವ್ಯರ್ಥ ಮಾಡುವ ಎರಡೂ ಸ್ನಾನಗಳನ್ನು ಮಾಡುವುದು ಸರಿ ಯಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಎಡೆಸ್ನಾನದ ನಂತರ ಆ ಅನ್ನವನ್ನು ಗೋವುಗಳಿಗೆ ನೀಡುವುದರಿಂದ ಅದು ವ್ಯರ್ಥವಾಗುವುದಿಲ್ಲ. ಈ ಸಂಪ್ರದಾಯವನ್ನು ಮುಂದುವರೆಸುವಂತೆ ಉಳಿದ ಮಠಾಧೀಶರಿಗೆ ನಾನು ಹೇಳುವುದಿಲ್ಲ. ನನ್ನ ಧೋರಣೆ ಯನ್ನು ಯಾರ ಮೇಲೆಯೂ ಹೇರಲ್ಲ. ಎಡೆಸ್ನಾನವನ್ನು ಮುಂದುವರೆಸು ವುದು ಅಥವಾ ಬಿಡುವುದು ಅವರವರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.
ಈ ಹಿಂದೆ ನಾನು ದಲಿತರ ಕೇರಿಗೆ ಭೇಟಿ ನೀಡಿದಾಗ ವಿರೋಧಿಸಿದವರೇ ಈಗ ಅದನ್ನು ಒಪ್ಪಿಕೊಂಡಿದ್ದಾರೆ. ಮಂತ್ರಾಲಯ ಶ್ರೀಗಳು ಇತ್ತೀಚೆಗೆ ಶಿವಮೊಗ್ಗದಲ್ಲಿ ದಲಿತರ ಕೇರಿಗೆ ಭೇಟಿ ನೀಡಿದ್ದಾರೆ. ಅದೇ ರೀತಿ ಕಂಚಿ ಕಾಮಕೋಟಿ ಶ್ರೀಗಳು, ದ್ವಾರಕಾಪೀಠದ ಶ್ರೀಗಳು ಸಹ ಆ ಕೆಲಸ ಮಾಡುತ್ತಿದ್ದಾರೆ ಎಂದು ಪೇಜಾವರ ಶ್ರೀ ತಿಳಿಸಿದರು.
ಜಯಲಲಿತಾ ಶೀಘ್ರ ಗುಣಮುಖರಾಗಲಿ
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದಲ್ಲಿ ಏರು ಪೇರಾಗಿದ್ದು, ಜನರು ಭಾವೋದ್ರೇಕಕ್ಕೆ ಒಳಗಾಗದೆ ತಾಳ್ಮೆಯಿಂದ ವರ್ತಿಸ ಬೇಕು. ಜಯಲಲಿತಾ ತಮಿಳುನಾಡಿಗೆ ಒಳ್ಳೆಯ ಸೇವೆ ಸಲ್ಲಿಸಿ ಅಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ದೇವರು ಅವರ ಅಭಿಮಾನಿಗಳ ಹರಕೆಯನ್ನು ಈಡೇರಿಸಲಿ. ಅದೇ ರೀತಿ ವೈದ್ಯಕೀಯ ಪ್ರಯತ್ನವೂ ಮುಂದು ವರೆಯಲಿ ಎಂದು ಪೇಜಾವರ ಶ್ರೀ ತಿಳಿಸಿದರು.







