ಬಾಬರೀ ಮಸೀದಿ ಪುನರ್‌ನಿರ್ಮಾಣ ಭರವಸೆ ಈಡೇರಿಸುವಂತೆ ಪಿಎಫ್‌ಐ ಒತ್ತಾಯ

ಮಂಗಳೂರು, ಡಿ. 5: ಸರಕಾರ ದೇಶದ ಜನತೆಗೆ ನೀಡಿರುವ ಭರವಸೆಯಂತೆ ಧ್ವಂಸಗೈಯ್ಯಲ್ಪಟ್ಟ ಅದೇ ಸ್ಥಳದಲ್ಲಿ ಕೂಡಲೇ ಬಾಬರೀ ಮಸೀದಿಯನ್ನು ಪುನರ್‌ನಿರ್ಮಾಣ ಮಾಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರಾಧ್ಯಕ್ಷ ಕೆ.ಎಂ.ಶರೀಫ್ ಒತ್ತಾಯಿಸಿದ್ದಾರೆ.
ಬಾಬರೀ ಮಸೀದಿ ಧ್ವಂಸಗೈದ 24ನೆ ಕರಾಳ ವರ್ಷಾಚರಣೆ ಪ್ರಯುಕ್ತ ಅವರು ಈ ಹೇಳಿಕೆ ನೀಡಿದ್ದಾರೆ.
ಬಾಬರೀ ಮಸೀದಿಯ ಧ್ವಂಸವು ಭಾರತದ ಜಾತ್ಯತೀತ, ಪ್ರಜಾಸತ್ತಾತ್ಮಕ ಮುಖಕ್ಕೆ ಇರುವ ಶಾಶ್ವತ ಕಪ್ಪುಚುಕ್ಕೆಯಾಗಿದೆ. ಸಂಘಪರಿವಾರದಿಂದ ನಡೆಸಲ್ಪಟ್ಟ ಈ ಉದ್ದೇಶಪೂರ್ವಕ ಕೃತ್ಯದ ಹಿಂದೆ ಅಂದಿನ ಕಾಂಗ್ರೆಸ್ ಸರಕಾರ ನೀಡಿದ್ದ ಸಹಕಾರವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.
ಈ ದುಷ್ಕತ್ಯದ ಬಳಿಕ ಕೂಡಲೇ ಅದೇ ಸ್ಥಳದಲ್ಲಿ ಮಸೀದಿಯನ್ನು ಪುಣರ್ ನಿರ್ಮಿಸಲಾಗುವುದು ಎಂದು ಅಂದು ಸರಕಾರ ಭರವಸೆ ನೀಡಿತ್ತು. ಇದೇ ಕಾರಣದಿಂದ ಎಲ್ಲ ಜಾತ್ಯತೀತ ಪಕ್ಷಗಳು ಮತ್ತು ಪ್ರಮುಖ ಮಾಧ್ಯಮಗಳು ಸರಕಾರವನ್ನು ಬೆಂಬಲಿಸಿತ್ತು. ಆದರೆ, ಇಷ್ಟು ವರ್ಷಗಳಾದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ದೇಶದ ಜನತೆಗೆ ನಂಬಿಕೆ ದ್ರೋಹ ಮಾಡಲಾಗಿದೆ ಎಂದು ಶರೀಫ್ ದೂರಿದರು.
ಆಡಳಿತಾತ್ಮಕವಾಗಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತದ ಮುಸ್ಲಿಮ್ ಸಮುದಾಯ ಅನ್ಯಾಯಕ್ಕೊಳಗಾಗಿದೆ. ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳ ಮುಂಬರುವ ಚುನಾವಣೆಯ ದೃಷ್ಟಿಯಿಂದ ಸಂಘಪರಿವಾರದಡಿಯಲ್ಲಿ ಬಿಜೆಪಿ ಸರಕಾರವು ಮಸೀದಿ ಧ್ವಂಸಗೈದ ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡುವ ಬಗ್ಗೆ ತಮ್ಮ ಕೋಮುಪ್ರಚಾರವನ್ನು ತೀವ್ರಗೊಳಿಸಿದೆ. ಈ ಮೂಲಕ ಸಂಘಪರಿವಾರ ಮತ್ತು ಬಿಜೆಪಿ ರಾಮ ಮಂದಿರ ನಿರ್ಮಾಣ ವಾದವನ್ನು ಮುಂದೆ ತರಲು ಯತ್ನಿಸುತ್ತಿದೆ ಎಂದು ಹೇಳಿದರು.
ಮುಂಬರುವ ಚುನಾವಣೆಗಳ ಹಿನ್ನಲೆಯಿಂದ ರಾಮಮಂದಿರದ ಹೆಸರಲ್ಲಿ ಕೋಮುಧ್ವೇಷ ಹರಡಲು ಯತ್ನಿಸುತ್ತಿರುವ ಸಂಘ ಪರಿವಾರದ ಪಿತೂರಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಬಾಬರೀ ಮಸೀದಿ ಧ್ವಂಸ ಮಾಡಿದ ಸ್ಥಳದಲ್ಲೇ ಮತ್ತೆ ಮಸೀದಿಯನ್ನು ನಿರ್ಮಿಸಲು ಮುಸ್ಲಿಮ್ ಸಮುದಾಯ ಮತ್ತು ಎಲ್ಲ ನೈಜ ಜಾತ್ಯತೀತ ಪಂಗಡದವರು ಕೈಜೋಡಿಸಬೇಕು ಎಂದು ಶರೀಫ್ ಕರೆ ನೀಡಿದ್ದಾರೆ.







